'ಆರ್ಆರ್ಆರ್' ಖ್ಯಾತಿಯ ರಾಮ್‌ಚರಣ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ನಿರ್ದೇಶಕ ಶಂಕರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಸಿನಿಮಾದಿಂದ ಇಲ್ಲಿಯವರೆಗೆ ಯಾವುದೇ ಅಪ್ಡೇಟ್ಸ್ ಬಂದಿಲ್ಲ. ಆದರೆ, ಈ ಚಿತ್ರ ಸೆಟ್ಟೇರಿದ ದಿನದಿಂದಲೂ ಕೆಲವು ವಿಚಾರಗಳು ಸೋರಿಕೆಯಾಗುತ್ತಿವೆ. ಇತ್ತೀಚೆಗೆ ಸಿನಿಮಾದ ಹಾಡು ಲೀಕ್ ಆಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಸೈಬರ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ರಾಮ್‌ಚರಣ್ ನಟನೆಯ ಸಿನಿಮಾ ಆಗಿದ್ದರಿಂದ 'ಗೇಮ್ ಚೇಂಜರ್' ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಇತ್ತೀಚೆಗೆ ಈ ಸಿನಿಮಾದ ಹಾಡು ಆನ್ಲೈನ್ನಲ್ಲಿ ಸೋರಿಕೆಯಾಗಿ, ವೈರಲ್ ಆಗಿತ್ತು. ಒಪ್ಪಿಗೆಯಿಲ್ಲದೇ, ಹಾಡು ಲೀಕ್ ಆಗಿದ್ದರ ಬಗ್ಗೆ ಕೋಪಗೊಂಡಿದ್ದ ಚಿತ್ರ ತಯಾರಕರು ಅಧಿಕೃತ ದೂರು ದಾಖಲಿಸಿದ್ದರು. ಅಲ್ಲದೇ, ಎಫ್ಐಆರ್ನ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹಂಚಿಕೊಂಡಿದ್ದರು. ಇದೀಗ ಹಾಡು ಸೋರಿಕೆಗೆ ಕಾರಣವಾದ ಇಬ್ಬರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಲೀಕ್ ಆದ ಹಾಡು ಅಂತಿಮವಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಇದು ಜಸ್ಟ್ ಟೆಸ್ಟಿಂಗ್ ಹಾಡಾಗಿತ್ತು. ಅಲ್ಲದೇ ಸ್ಟಾರ್ ಗಾಯಕರು ಈ ಹಾಡಿಗೆ ಧ್ವನಿಯಾಗಲಿದ್ದಾರೆ. ಫೈನಲ್ ಮಿಕ್ಸ್ನಲ್ಲಿ ಇನ್ನೂ ಸಾಕಷ್ಟು ಕೆಲಸಗಳಿವೆಯಂತೆ. ಸೌಂಡ್ ಮಿಕ್ಸಿಂಗ್ ನಂತರ ಈ ಹಾಡು ಮತ್ತಷ್ಟು ಚೆನ್ನಾಗಿ ಮೂಡಿ ಬರಲಿದೆ ಎನ್ನಲಾಗಿದೆ. ಇದು ಒರಿಜಿನಲ್ ಹಾಡು ಅಲ್ಲ. 15 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಆದರೆ, ಸೋರಿಕೆಯಾದ 30 ಸೆಕೆಂಡ್ಗಳ ಹಾಡು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.