ಗಣೇಶ್ ಜೊತೆಗೆ ದಿಗಂತ್ ಹಾಗೂ ಪವನ್ ಕುಮಾರ್ ನಟನೆಯ ಗಾಳಿಪಟ 2 ಚಿತ್ರ, ಪೋಸ್ಟರ್ ಹಾಗೂ ಹಾಡುಗಳಿಂದಲೇ ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತಿದೆ. ಇದೀಗ ಪವನ್ ಕುಮಾರ್ ಹಾಗು ಶರ್ಮಿಳಾ ಮಂಡ್ರೆ ಕಾಂಬಿನೇಷನ್ ರೊಮ್ಯಾಂಟಿಕ್ ಹಾಡೊಂದು ಅನಾವರಣಗೊಂಡಿದೆ.
ರೊಮ್ಯಾಂಟಿಕ್ ಗೀತೆಗಳ ಗುರು, ಜಯಂತ ಕಾಯ್ಕಿಣಿ ಬರೆದಿರುವ "ನೀನು ಬಗೆಹರಿಯದ ಹಾಡು" ಎಂಬ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು, ಖ್ಯಾತ ಗಾಯಕ ನಿಹಾಲ್ ತಾವ್ರೋ ಹಾಡಿದ್ದಾರೆ. ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಕುದುರೆಮುಖದ ಸುಂದರ ಪರಿಸರದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿದ್ದು, ಕೊರಿಯೋಗ್ರಾಪರ್ ಧನು ಈ ಹಾಡಿನ ನೃತ್ಯ ನಿರ್ದೇಶನ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಹೀಗೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದ್ದಾರೆ. ಇನ್ನು ಪ್ರಖ್ಯಾತ ನಿರ್ಮಾಪಕ, ರಮೇಶ್ ರೆಡ್ಡಿ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಜಿಕ್ ಇದ್ದು, ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಗಾಳಿಪಟ 2 ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಸದ್ಯದಲ್ಲೇ ಟೀಸರ್, ಟ್ರೇಲರ್ ಹಾಗೂ ಇನ್ನೂ ಎರಡು ಹಾಡುಗಳ ಬಿಡುಗಡೆಯಾಗಲಿದೆ. ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಬರಲಿದೆ. ಮತ್ತೊಂದು ಕಡೆ ಈ ಚಿತ್ರ ಬಿಡುಗಡೆಗೆ ಅಭಿಮಾನಿ ಸಮೂಹ ಕಾತರದಿಂದ ಕಾಯುತ್ತಿದ್ದಾರೆ.
ಓದಿ:ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೂ ಮುನ್ನ ಗಾಳಿಪಟ-2 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್