ಸನ್ನಿ ಡಿಯೋಲ್ ಮುಖ್ಯಭೂಮಿಕೆಯ ಗದರ್ 2 ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಾಕ್ಸ್ ಆಫೀಸ್ ಸಂಖ್ಯೆ ಎಲ್ಲರ ಹುಬ್ಬೇರಿಸುವಂತಿದೆ. ಆದ್ರೆ ಸಿನಿಮಾ ಕುರಿತು ಕೆಲ ಟೀಕೆಗಳೂ ವ್ಯಕ್ತವಾಗಿವೆ. ಪಾಕಿಸ್ತಾನಿ ವಿರೋಧಿ ಮತ್ತು ಮುಸ್ಲಿಂರನ್ನು ನೆಗೆಟಿವ್ ಆಗಿ ತೋರಿಸಿ ಚಿತ್ರೀಕರಿಸಲಾಗಿದೆ ಎಂಬ ಟೀಕೆಗೆ ನಾಯಕ ನಟ ಸನ್ನಿ ಡಿಯೋಲ್ ಪ್ರತಿಕ್ರಿಯಿಸಿದ್ದಾರೆ. ಗದರ್ 2ನ ಯಶಸ್ಸಿನ ಹೊರತಾಗಿಯೂ ಈ ರೀತಿಯ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ಗದರ್ 2 ಕುರಿತಾಗಿನ ಟೀಕೆಗಳನ್ನು ನಾಯಕ ನಟ ಸನ್ನಿ ಡಿಯೋಲ್ ನಿರಾಕರಿಸಿದರು. ಸಿನಿಮಾವನ್ನು ತೀವ್ರತರನಾದ ಚರ್ಚೆಗೆ ಅಥವಾ ವಿಶ್ಲೇಷಣೆಗೆ ಒಳಪಡಿಸುವ ಬದಲು ಮನರಂಜನೆಯಾಗಿ ನೋಡಿ ಎಂದು ಒತ್ತಿ ಹೇಳಿದರು. ಸಂದರ್ಶನವೊಂದರಲ್ಲಿ, ಗದರ್ 2 ಸಿನಿಮಾವನ್ನು ಪಾಕಿಸ್ತಾನಿ ವಿರೋಧಿ ಎಂದು ಗ್ರಹಿಸಲಾಗಿದೆ ಎಂಬ ವಿಷಯನ್ನುದ್ದೇಶಿಸಿ ಸನ್ನಿ ಡಿಯೋಲ್ ಮಾತನಾಡಿದರು. 1947 ರಲ್ಲಾದ ವಿಭಜನೆಯಿಂದ ಉಂಟಾಗಿರುವ ದ್ವೇಷವನ್ನು ಒಪ್ಪಿಕೊಂಡರು. ಆದ್ರೆ, ಅಂತಹ ಭಾವನೆಗಳಿಂದ ಹಿಂದೆ ಸರಿಯಲು ಅಥವಾ ಹೊರ ಬರಲು ಇದು ಸೂಕ್ತ ಸಮಯ ಎಂದೂ ಕೂಡ ತಿಳಿಸಿದರು.
ತಮ್ಮ ವೃತ್ತಜೀವನದ್ದುದ್ದಕ್ಕೂ ಮಾಡಿರುವ ಪಾತ್ರಗಳ ಮಹತ್ವ ಕಡಿಮೆ ಮಾಡುವ ಉದ್ದೇಶ ಹೊಂದಿಲ್ಲ ಎಂದು ನಟ ಸ್ಪಷ್ಟಪಡಿಸಿದರು. ಇದಕ್ಕೆ ತಮ್ಮ ಗದರ್ 2 ಚಿತ್ರದ ತಾರಾ ಸಿಂಗ್ ಪಾತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡರು. ಯಾವುದೇ ಪಾತ್ರಗಳನ್ನು ಅವಮಾನಿಸುವುದಿಲ್ಲ. ಯಾವುದೇ ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿಕೊಳ್ಳದಂತಹ ಜವಾಬ್ದಾರಿಯನ್ನು ಹೊಂದಿದ್ದೇನೆಂದು ತಿಳಿಸಿದರು. ಗದರ್ 2 ಅಲ್ಲದೇ ಹಿಂದಿನ ಬಾರ್ಡರ್ ಸಿನಿಮಾವನ್ನೂ ಉಲ್ಲೇಖಿಸಿದರು. ಯುದ್ಧದ ಸಂದರ್ಭದ ಸೈನಿಕರ ನೈಜ ಅನುಭವಗಳಿಂದ ಈ ಸಿನಿಮಾ ಪ್ರೇರಿತವಾಗಿದೆ ಎಂದು ತಿಳಿಸಿದರು. ಅದಾಗ್ಯೂ, ಸಿನಿಮಾ ಕುರಿತಾಗಿನ ವ್ಯಾಖ್ಯಾನಗಳು ಬದಲಾಗಬಹುದು ಎಂಬುದನ್ನು ಒಪ್ಪಿಕೊಂಡರು.