ಚಂಡೀಗಢ (ಪಂಜಾಬ್):2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ತೆಲುಗಿನ ಆರ್ಆರ್ಆರ್ ಚಿತ್ರದ ಸೂಪರ್ ಹಿಟ್ ಹಾಡು ನಾಟು ನಾಟು ಕ್ರೇಜ್ ಮುಂದುವರಿದಿದೆ. ಚಂಡೀಗಢದಲ್ಲಿ ಬುಧವಾರ ಜಿ-20 ಎರಡನೇ ಕೃಷಿ ಪ್ರತಿನಿಧಿಗಳ ಸಭೆಯ (ADM) ಸಂದರ್ಭದಲ್ಲಿ ಪ್ರತಿನಿಧಿಗಳು ಜನಪ್ರಿಯ ಹಾಡಿಗೆ ಮೈ ಕುಣಿಸಿದರು. ವಿದೇಶಿ ಪ್ರತಿನಿಧಿಗಳು ಚಂಡೀಗಢದ ಸ್ಥಳೀಯ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಪ್ರತಿಷ್ಠಿತ ಆಸ್ಕರ್ 2023 ಸಮಾರಂಭ ನಡೆಯಿತು. ಆರ್ಆರ್ಆರ್ ಚಿತ್ರದ ಸೂಪರ್ ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರತಿಷ್ಟಿತ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿ ಪಡೆದ ಬಳಿಕ ನಟ ರಾಮ್ ಚರಣ್, ಜೂ. ಎನ್ಟಿಆರ್, ನಿರ್ದೇಶಕ ರಾಜಮೌಳಿ ಅವರ ಖ್ಯಾತಿ ಸಾಗರದಾಚೆಗೂ ಹಬ್ಬಿದೆ. ಭಾರತೀಯ ಚಲನಚಿತ್ರೋದ್ಯಮ ಮತ್ತಷ್ಟು ಸೃಜನಶೀಲ ಸಿನಿಮಾಗಳನ್ನು ನಿರ್ಮಿಸಲು ಪ್ರಶಸ್ತಿ ಪ್ರೇರಣೆ ಒದಗಿಸಿದೆ.
ನಾಟು ನಾಟು ಗೀತೆ ರಚನೆಕಾರ ಚಂದ್ರಬೋಸ್, ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಅವರ ಹಾಡಿಗೆ ಆಕರ್ಷಕವಾಗಿ ನೃತ್ಯ ಮಾಡಿ ಮನಸ್ಸು ಗೆದ್ದವರು ರಾಮ್ ಚರಣ್ ಮತ್ತು ಜೂ. ಎನ್ಟಿಆರ್. ಎಲ್ಲರ ಪ್ರರಿಶ್ರಮದ ಫಲ ಮತ್ತು ಅಭಿಮಾನಿಗಳ ಬೆಂಬಲ, ಪ್ರೀತಿಯಿಂದಾಗಿ ನಾಟು ನಾಟು ಆಸ್ಕರ್ ಗೆಲ್ಲಲು ಸಾಧ್ಯವಾಯಿತು ಎಂದು ಚಿತ್ರತಂಡ ಹೇಳಿಕೊಂಡಿದೆ.