ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ವಿಭಿನ್ನ ಕಥೆಗಳಿಗೆ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಉತ್ತಮ ಕಥಾಹಂದರದ ಜೊತೆಗೆ ಮೇಕಿಂಗ್ ವಿಷಯದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. 2022ರಲ್ಲಿ ಸ್ಯಾಂಡಲ್ವುಡ್ ಅದ್ಭುತ ಯಶಸ್ಸು ಸಾಧಿಸಿದ್ದು, ಅದೇ ಹಾದಿಯಲ್ಲಿ ಸಾಗಲು ಪ್ರತೀ ಚಿತ್ರತಂಡಗಳು ಪೂರ್ಣ ಪ್ರಮಾಣದಲ್ಲಿ ಶ್ರಮ ಹಾಕುತ್ತಿದೆ. ಇದೀಗ ಫುಲ್ ಮೀಲ್ಸ್ ಟೈಟಲ್ನ ಚಿತ್ರವೊಂದರ ಶೂಟಿಂಗ್ ಭರದಿಂದ ಸಾಗಿದೆ.
ಫುಲ್ ಮೀಲ್ಸ್ ಸಿನಿಮಾ: ಸಂಕಷ್ಟಕರ ಗಣಪತಿ ಹಾಗೂ ಫ್ಯಾಮಿಲಿ ಪ್ಯಾಕ್ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಲಿಖಿತ್ ಶೆಟ್ಟಿ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರದ ಬಳಿಕ ಲಿಖಿತ್ ಶೆಟ್ಟಿ ನಾಯಕರಾಗಿ ಅಭಿನಯಿಸುತ್ತಿರುವ ಚಿತ್ರ ಫುಲ್ ಮೀಲ್ಸ್.
ಫುಲ್ ಮೀಲ್ಸ್ ಶೂಟಿಂಗ್: ಬೆಂಗಳೂರಿನಲ್ಲಿ ಸೈಲೆಂಟ್ ಆಗಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ನಟ ಲಿಖಿತ್ ಶೆಟ್ಟಿ, ನಾಯಕಿ ಖುಷಿ ರವಿ, ರಂಗಾಯಣ ರಘು, ಚಂದ್ರಕಲಾ ಮೋಹನ್, ರಮೇಶ್ ಪಂಡಿತ್, ಗಣೇಶ್ ರಾವ್, ವಿಜಯ್ ಚೆಂಡೂರ್ ಈ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕ ಎನ್ ವಿನಾಯಕ ಈ ಫುಲ್ ಮೀಲ್ಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಮನೋರಂಜನೆಯ "ಫುಲ್ ಮೀಲ್ಸ್": ಫುಲ್ ಮೀಲ್ಸ್ ಚಿತ್ರದ ಬಗ್ಗೆ ಮಾತನಾಡಿದ ನಟ ಲಿಖಿತ್ ಶೆಟ್ಟಿ, ನಾನು ಈ ಚಿತ್ರದಲ್ಲಿ ಫೋಟೋಗ್ರಾಫರ್ ಪಾತ್ರ ವಹಿಸಿದ್ದೇನೆ. ಮದುವೆ ಮನೆಗೆ ಫೋಟೋ ತೆಗೆಯಲು ಹೋದಾಗ ಮದುಮಗಳ ಮೇಲೆ ಪ್ರೀತಿ ಆಗುತ್ತದೆ. ಆನಂತರ ಏನಾಗುತ್ತದೆ? ಎಂಬುದನ್ನು ಚಿತ್ತದಲ್ಲೇ ನೋಡಬೇಕು. ಒಟ್ಟಿನಲ್ಲಿ ನಾವು ಇಡೀ ತಂಡ ಸೇರಿ ಪ್ರೇಕ್ಷಕರಿಗೆ ಮನೋರಂಜನೆಯ "ಫುಲ್ ಮೀಲ್ಸ್" ನೀಡಲಿದ್ದೇವೆ ಎಂದರು.