ಕರ್ನಾಟಕ

karnataka

ETV Bharat / entertainment

ಹೋಗಿ ಬರ್ತೀನಿ 'ಫ್ರೆಂಡ್ಸ್'!​ ಅಮೆರಿಕದ ಜನಪ್ರಿಯ ನಟ ಮ್ಯಾಥ್ಯೂ ಪೆರ್ರಿ ಇನ್ನಿಲ್ಲ - ಮ್ಯಾಥ್ಯೂ ಪೆರ್ರಿ ನಿಧನ

ಅಮೆರಿಕದ ಜನಪ್ರಿಯ ಟಿವಿ ಶೋ 'ಫ್ರೆಂಡ್ಸ್'​ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ನಿಧನರಾಗಿದ್ದಾರೆ.

friends-star-matthew-perry-passes-away-at-54
ಫ್ರೆಂಡ್ಸ್​ ಖ್ಯಾತಿಯ ಮ್ಯಾಥ್ಯೂ ಪೆರ್ರಿ ನಿಧನ : ಮನೆಯ ಟಬ್​ನಲ್ಲಿ ಶವವಾಗಿ ಪತ್ತೆ

By ANI

Published : Oct 29, 2023, 11:10 AM IST

ಲಾಸ್​​ ಏಂಜಲೀಸ್​​ (ಅಮೆರಿಕ): ಜನಪ್ರಿಯ 'ಫ್ರೆಂಡ್ಸ್'​ ಟಿವಿ ಶೋ ಮೂಲಕ ಅಮೆರಿಕದಾದ್ಯಂತ ಮನೆ ಮಾತಾಗಿದ್ದ ಪ್ರಸಿದ್ಧ ಹಾಲಿವುಡ್​ ನಟ ಮ್ಯಾಥ್ಯೂ ಪೆರ್ರಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 54 ವರ್ಷ ವಯಸ್ಸಾಗಿತ್ತು. ಶನಿವಾರ ಪೆರ್ರಿ, ಲಾಸ್​ ಎಂಜಲೀಸ್​ನಲ್ಲಿರುವ ತಮ್ಮ ಮನೆಯ ಸ್ನಾನದ ಟಬ್‌ನಲ್ಲಿ​(ಹಾಟ್​ ಟಬ್​) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಯುಎಸ್​ ಮಾಧ್ಯಮಗಳು ವರದಿ ಮಾಡಿವೆ.

ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ಕುರುಹುಗಳು ಪತ್ತೆಯಾಗಿಲ್ಲ. ಯಾವುದೇ ಮಾದಕವಸ್ತು ಸೇವನೆಯ ಅಂಶಗಳೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

'ಫ್ರೆಂಡ್ಸ್'ನ ಚಾಂಡ್ಲರ್ ಬಿಂಗ್​ ಪಾತ್ರ ಪೆರ್ರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಈ ಶೋ ಸುಮಾರು ಒಂದು ದಶಕಗಳ ಕಾಲ ನಡೆದು, ಅಮೆರಿಕಾದ್ಯಂತ ಜನಪ್ರಿಯ ಶೋ ಆಗಿ ಹೊರಹೊಮ್ಮಿತ್ತು. 1994ರಲ್ಲಿ ಪ್ರಾರಂಭವಾದ ಶೋ 2004ರ ತನಕ ಒಟ್ಟು ಹತ್ತು ಸೀಸನ್​ಗಳನ್ನು ಪೂರೈಸಿತ್ತು. ಫ್ರೆಂಡ್ಸ್​ನಲ್ಲಿನ ನಟನೆಗಾಗಿ ಪೆರ್ರಿ 2002ರಲ್ಲಿ ಪ್ರೈಮ್​ ಟೈಮ್​ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಫ್ರೆಂಡ್ಸ್​ ಹೊರತಾಗಿ, ಪೆರ್ರಿ ಅವರು ಸ್ಟುಡಿಯೋ 60 ಆನ್​ ದ ಸನ್​ಸೆಟ್​ ಸ್ಟ್ರಿಪ್​​, ಗೋ ಆನ್​, ದ ಓಡ್​ ಕಪಲ್​ ಮುಂತಾದ ಟೆಲಿವಿಷನ್​ ಸಿರೀಸ್​ಗಳಲ್ಲಿ ನಟಿಸಿದ್ದಾರೆ. ಇವರ ಅದ್ಭುತ ನಟನೆಗೆ 2003 ಮತ್ತು 2004ರಲ್ಲಿ ಎರಡು ಬಾರಿ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದರು. ದ ವೆಸ್ಟ್​ ವಿಂಗ್​ ಸಿರೀಸ್​ನ ಜೋ ಕ್ವಿನ್ಸಿ ಪಾತ್ರಕ್ಕೆ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಮ್ಯಾಥ್ಯೂ ಪೆರ್ರಿ, ಜೆನ್ನಿಫರ್ ಅನಿಸ್ಟನ್, ಲಿಸಾ ಕುಡ್ರೋ, ಡೇವಿಡ್ ಶ್ವಿಮ್ಮರ್, ಕೋರ್ಟೆನಿ ಕಾಕ್ಸ್ ಮತ್ತು ಮ್ಯಾಟ್ ಲೆಬ್ಲಾಂಕ್ ಜೊತೆಗೆ ಫ್ರೆಂಡ್ಸ್‌ನಲ್ಲಿ ನಟಿಸಿದ್ದರು. ಇದಕ್ಕೂ ಮೊದಲು ಹೂ ಇಸ್​ ದ ಬಾಸ್​, ಬೆವರ್ಲಿ ಹಿಲ್​, ಹೋಮ್​ ಫ್ರೀ ಮುಂತಾದ ಟಿವಿ ಸೀರೀಸ್​ನಲ್ಲಿ ಅಭಿನಯಿಸಿದ್ದಾರೆ. ಆದರೆ ಫ್ರೆಂಡ್ಸ್​ನಲ್ಲಿನ ಚಾಂಡ್ಲರ್ ಬಿಂಗ್​ ಪಾತ್ರ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು.

ಫ್ರೆಂಡ್ಸ್​​ ಟಿವಿ ಶೋ, ಅಮೆರಿಕದ ನ್ಯೂಯಾರ್ಕ್​ ಸಿಟಿಯಲ್ಲಿ ವಾಸಿಸುವ 20 ಮತ್ತು 30ರ ಹರೆಯದ ಆರು ಜನ ಗೆಳೆಯರ ಕಥೆ. ಸುಮಾರು 25 ಮಿಲಿಯನ್ ಅಧಿಕ ವೀಕ್ಷಕರನ್ನು ಈ ಟಿವಿ ಶೋ ಗಳಿಸಿತ್ತು. ಅಂತಿಮ ಎಪಿಸೋಡ್​ನ್ನು 52.5 ಮಿಲಿಯನ್​ ಜನರು ವೀಕ್ಷಣೆ ಮಾಡಿದ್ದರು. ಈ ಮೂಲಕ 2000 ಇಸವಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟಿವಿ ಶೋಗಳಲ್ಲಿ ಐದನೇ ಸ್ಥಾನ ಪಡೆದಿತ್ತು.

ಫ್ರೆಂಡ್ಸ್​ನಲ್ಲಿ ಮ್ಯಾಥ್ಯೂ ಪೆರ್ರಿ ಪಾತ್ರ ವಿಭಿನ್ನವಾಗಿತ್ತು. ಇವರ ಹಾಸ್ಯ ಮತ್ತು ಅದ್ಬುತ ನಟನೆ ನೋಡುಗರನ್ನು ನಗೆಗಡಲಲ್ಲಿ ತೇಲಿಸುವಂತಿತ್ತು. ಈ ಟಿವಿ ಶೋ ಮೂಲಕ ಎಲ್ಲರನ್ನೂ ನಕ್ಕು ನಗಿಸುವ ಕೆಲಸ ಮಾಡುತ್ತಿದ್ದರು. ಈ ಮೂಲಕವೇ ಸಾವಿರಾರು ಪ್ರೇಕ್ಷಕರನ್ನು ಹಿಡಿದಿಟ್ಟಿದ್ದರು. ಇವರ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಅಪ್ಪು ಮರೆಯಾಗಿ ಇಂದಿಗೆ 2 ವರ್ಷ: ಸಾಮಾಜಿಕ ಕಳಕಳಿಯ ಸಿನಿಮಾಗಳಲ್ಲಿ 'ಗಂಧದ ಗುಡಿ'ಯ 'ರಾಜಕುಮಾರ' ಅಮರ

ABOUT THE AUTHOR

...view details