ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಸಿನಿಮಾ ಆಕಾಂಕ್ಷಿಗಳನ್ನು ಎಚ್ಚರಿಸಿದ್ದಾರೆ. ತಮ್ಮ ಹೆಸರಿನಲ್ಲಿ ಬರುವ ಇಮೇಲ್‌ಗಳನ್ನು ನಂಬಬೇಡಿ ಎಂದು ತಿಳಿಸಿದ್ದಾರೆ. ತಮ್ಮ ಹೆಸರನ್ನು ಬಳಸಿಕೊಂಡು ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಲ್ಮಾನ್ ಖಾನ್ ಎಚ್ಚರಿಕೆ ಕೊಟ್ಟಿದ್ದಾರೆ.
ಸಲ್ಮಾನ್ ಖಾನ್ ಫಿಲ್ಮ್ಸ್ ನಕಲಿ ಇಮೇಲ್: ಸಲ್ಮಾನ್ ಖಾನ್ ಅವರು 'ಸಲ್ಮಾನ್ ಖಾನ್ ಫಿಲ್ಮ್ಸ್' ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಕಂಪನಿಯ ಹೆಸರಿನಲ್ಲಿ ನಕಲಿ ಇಮೇಲ್‌ಗಳು ಹರಿದಾಡುತ್ತಿವೆ. ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಿಸುವ ಚಿತ್ರಕ್ಕೆ ನಾವು ನಟರನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ನಕಲಿ ಮೇಲ್ನಲ್ಲಿ ತಿಳಿಸಲಾಗುತ್ತಿದೆ. ನಿಮಗೆ ಆಸಕ್ತಿ ಇದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಸಿನಿಮಾ ಆಕಾಂಕ್ಷಿಗಳನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈ ವಿಷಯ ಸಲ್ಮಾನ್ ಖಾನ್ ಗಮನಕ್ಕೂ ಬಂದಿದೆ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ವಂಚನೆಯ ಜಾಲಕ್ಕೆ ಬೀಳುವವರ ಜೊತೆಗೆ ವಂಚಕರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸಲ್ಮಾನ್ ಖಾನ್ ಹೇಳಿದ್ದೇನು?: ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರನಟ ಸಲ್ಮಾನ್ ಖಾನ್ ಆಗಲಿ ಅಥವಾ ಅವರ ಸಲ್ಮಾನ್ ಖಾನ್ ಫಿಲ್ಮ್ಸ್ ಸಂಸ್ಥೆಯಾಗಲಿ ಸದ್ಯಕ್ಕೆ ಯಾವುದೇ ಹೊಸ ನಟರನ್ನು ನೇಮಿಸಿಕೊಳ್ಳುತ್ತಿಲ್ಲ. ನಾವು ನಿರ್ಮಾಣ ಮಾಡಲಿರುವ ಮುಂದಿನ ಸಿನಿಮಾಗಳಿಗಾಗಿ ಯಾವುದೇ ಕಾಸ್ಟಿಂಗ್ ಏಜೆಂಟ್‌ಗಳನ್ನೂ ನೇಮಿಸಿಲ್ಲ. ಸಲ್ಮಾನ್ ಖಾನ್ ಫಿಲ್ಮ್ಸ್ ಕಂಪನಿ ನಿರ್ಮಾಣ ಮಾಡುವ ಸಿನಿಮಾಗಳಿಗೆ ಹೊಸ ನಟರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಸಂದೇಶಗಳು ಬಂದರೆ ಅದನ್ನು ನಂಬಬೇಡಿ. ಯಾರಾದರೂ ಸಲ್ಮಾನ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದರೆ ಖಂಡಿತಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನಟ ಶೇರ್ ಮಾಡಿರುವ ಪೋಸ್ಟ್ನಲ್ಲಿ ತಿಳಿಸಲಾಗಿದೆ.