18ನೇ ವಯಸ್ಸಿಗೆ ವಿಶ್ವ ಸುಂದರಿ ಪಟ್ಟ ಗೆದ್ದ ಸುಶ್ಮಿತಾ ಸೇನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅವರಿಗೆ ಆತ್ಮೀಯರು, ಸ್ನೇಹಿತರು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.
90ರ ದಶಕದಲ್ಲಿ ಬಾಲಿವುಡ್ನಲ್ಲಿ ಮಿಂಚು ಹರಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದ್ಭುತ ಅಭಿನಯದ ಜೊತೆಗೆ ಎಂಥವರನ್ನೂ ಮೋಡಿ ಮಾಡುವ ನೃತ್ಯ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. 1994ರಲ್ಲಿ ಅಂದ್ರೆ ತಮ್ಮ 18ನೇ ವಯಸ್ಸಿನಲ್ಲಿ 'ಮಿಸ್ ಯೂನಿವರ್ಸ್' ಕಿರೀಟವನ್ನು ಪಡೆದರು. ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿ ಗುರುತಿಸಿಕೊಂಡು ದೇಶದ ಹಿರಿಮೆ ಹೆಚ್ಚಿಸಿದರು. ನಂತರ ಸಿನಿಮಾಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದರು.
ಪುತ್ರಿ(ದತ್ತು ಮಗಳು) ರೆನೀ Renee ತಾಯಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಚಿತ್ರವನ್ನು ಹಂಚಿಕೊಂಡ ಅವರು, "ನನ್ನ ಲೈಫ್‌ಲೈನ್‌ಗೆ ಜನ್ಮದಿನದ ಶುಭಾಶಯಗಳು. ನೀವು ನಿಮ್ಮ ಜೀವನದ ಅತ್ಯುತ್ತಮ ಹಂತವನ್ನು ಪ್ರವೇಶಿಸುತ್ತಿರುವ ಈ ಹೊತ್ತಿನಲ್ಲಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮಗೆ ವಿಶಾಲ ಮತ್ತು ಕ್ಷಮಿಸುವ ಹೃದಯವಿದೆ. ನಿಮ್ಮ ಮಗಳಾಗಿರುವುದು ನನ್ನ ಮೇಲಿನ ದೇವರ ಬಹುದೊಡ್ಡ ಆಶೀರ್ವಾದ. ನೀವು ಸಾಟಿಯಿಲ್ಲದ ಪರಂಪರೆಯನ್ನು ಸೃಷ್ಟಿಸಿದ್ದೀರಿ ಮತ್ತು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಅದಕ್ಕೆ ನಾನು ಪ್ರತಿನಿತ್ಯ ಸಾಕ್ಷಿಯಾಗಿದ್ದೇನೆ. ನೀವು ಏನು ಮುಟ್ಟಿದರೂ ಚಿನ್ನವಾಗುತ್ತದೆ, ಏಕೆಂದರೆ ನೀವು ಎಲ್ಲವನ್ನೂ ತುಂಬಿ ಪ್ರೀತಿ, ಸಮರ್ಪಣಾ ಭಾವದಿಂದ ಕಠಿಣ ಪರಿಶ್ರಮ ಮಾಡುತ್ತೀರಿ. ನೀವು ನಟನೆಯಲ್ಲಿ ಒಂದು ಸಂಸ್ಥೆ ಅಂತಲೇ ಹೇಳಬಹುದು'' ಎಂದು ಬರೆದಿದ್ದಾರೆ.