ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರು ಇತ್ತೀಚೆಗಷ್ಟೇ ಹೆಲ್ಮೆಟ್ ಇಲ್ಲದೇ ಬೈಕ್ ಏರಿ ಸದ್ದು ಮಾಡಿದ್ದರು. ಟ್ರಾಫಿಕ್ ಹಿನ್ನೆಲೆ ತಮ್ಮ ಐಷಾರಾಮಿ ಕಾರುಗಳ ಬದಲು ಬೈಕ್ಗಳನ್ನು ಬಳಸಿ ಅಭಿಮಾನಿಗಳ ಗಮನ ಸೆಳೆದಿದ್ದರು. ಜೊತೆಗೆ, ಹೆಲ್ಮೆಟ್ ಧರಿಸದೇ ಸಮಸ್ಯೆಯನ್ನು ಆಹ್ವಾನಿಸಿದ್ದರು. ಇದೀಗ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಭಾನುವಾರದಂದು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಶೂಟಿಂಗ್ ಸೆಟ್ಗೆ ತೆರಳುವ ಸಲುವಾಗಿ ಅಪರಿಚಿತರಿಂದ ಬೈಕ್ ಡ್ರಾಪ್ ಪಡೆದಿದ್ದರು. ಅದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಕೂಡ ಮಾಡಿದ್ದರು. ಬಳಿಕ ಸೋಮವಾರ ಮುಂಜಾನೆ ಬಹುಬೇಡಿಕೆ ನಟಿ ಅನುಷ್ಕಾ ಶರ್ಮಾ ಅವರು ಸಹ ತಮ್ಮ ಅಂಗರಕ್ಷಕನೊಂದಿಗೆ ಬೈಕ್ನಲ್ಲಿ ಸಂಚರಿಸಿದ್ದರು. ಅವರ ದೃಶ್ಯ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು. ಟ್ರಾಫಿಕ್ ಹಿನ್ನೆಲೆ, ಶೀಘ್ರ ತಮ್ಮ ಕೆಲಸದ ಸ್ಥಳಕ್ಕೆ ಶೀಘ್ರ ತಲುಪುವ ಸಲುವಾಗಿ ವೇಗದ ಸಾರಿಗೆ ವಿಧಾನವನ್ನು ಆರಿಸಿಕೊಂಡಿದ್ದರು. ಅವರ ವಿಡಿಯೋ ಮತ್ತು ಫೋಟೋಗಳು ಆನ್ಲೈನ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಮುಂಬೈನ ರಸ್ತೆಗಳಲ್ಲಿನ ಟ್ರಾಫಿಕ್ ಸ್ಥಿತಿಯನ್ನು ಗಮನಿಸಿದ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಅಂಗರಕ್ಷಕನೊಂದಿಗೆ ಬೈಕ್ನಲ್ಲಿ ಹೋಗುವುದು ಸರಿ ಎಂದು ಭಾವಿಸಿದರು. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಅನುಷ್ಕಾ ಶರ್ಮಾ ಅವರ ಅಂಗರಕ್ಷಕ ಸೋನು ಶೇಖ್ ಅವರಿಗೆ ಮುಂಬೈ ಟ್ರಾಫಿಕ್ ಪೊಲೀಸರು ಭಾರಿ ದಂಡ ವಿಧಿಸಿದ್ದಾರೆ.
ವರದಿಗಳ ಪ್ರಕಾರ, ಅನುಷ್ಕಾ ಶರ್ಮಾ ಅವರ ಅಂಗರಕ್ಷಕ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸಿದ್ದಕ್ಕಾಗಿ ಸೆಕ್ಷನ್ 129/194, ಸೆಕ್ಷನ್ 5/180 ಮತ್ತು ಸೆಕ್ಷನ್ 3 (1) 18ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರು ನಟಿಯ ಅಂಗರಕ್ಷಕನಿಗೆ ಹತ್ತೂವರೆ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.