ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಮೂರು ದಿನ ಬಾಕಿ ಇದೆ. ಮೂರು ವರ್ಷಗಳ ಬಳಿಕ ಸರ್ಕಾರದ ಆದೇಶದ ಮೇರೆಗೆ ಇದೇ ತಿಂಗಳು 28ರಂದು ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕಾಗಿ ಚುನಾವಣೆ ನಡೆಯುತ್ತಿದೆ. ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ.ಮಾ.ಹರೀಶ್ ಹಾಗು ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.
ಈಗಾಗಲೇ ಒಂದು ಬಾರಿ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿದ್ದ ಸಾ.ರಾ.ಗೋವಿಂದು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರೋದು ಚಿತ್ರರಂಗದ ಕೆಲ ವರ್ಗದಲ್ಲಿ ಅಸಮಾಧಾನ ತಂದಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಭಾ.ಮಾ.ಹರೀಶ್ ಅವರಿಗೆ ಚಿತ್ರರಂಗ ಸಾಥ್ ನೀಡುತ್ತಿದೆ. ಬೆಂಗಳೂರಿನ ವಿಜಯನಗರ ಕ್ಲಬ್ನಲ್ಲಿ ಭಾ.ಮಾ.ಹರೀಶ್ ಪರವಾಗಿ ಚಿತ್ರರಂಗದವರು ಸುದ್ದಿಗೋಷ್ಟಿ ನಡೆಸಿ, ಭಾ.ಮಾ ಹರೀಶ್ ಅಧ್ಯಕ್ಷ ಸ್ಥಾನ ಅಲಂಕರಿಸಬೇಕೆಂಬುದು ಹೆಚ್ಚಿನವರ ಆಸೆ ಎಂದು ಹೇಳಿದರು.