ನವದೆಹಲಿ:ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ಬೆಂಗಳೂರಿನಲ್ಲಿ ನಡೆದಿದ್ದು, 2020 ಹಾಗೂ 2021ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ 67ನೇ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ನೀಡಲಾಗಿದೆ.
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರತ್ಯೇಕವಾಗಿ ಈ ಪ್ರಶಸ್ತಿಗಳನ್ನು ನೀಡಲಾಗಿದ್ದು, ನಾಲ್ಕು ಸಿನಿಮಾ ರಂಗದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅತ್ಯುತ್ತಮ ನಟ ಪ್ರಶಸ್ತಿಯು ಡಾಲಿ ಧನಂಜಯ್ ಬಡವ ರಾಸ್ಕಲ್ ಸಿನಿಮಾದ ನಟನೆಗಾಗಿ ಪಡೆದುಕೊಂಡಿದ್ದಾರೆ. ಈ ಬಾರಿ ಜೀವಮಾನ ಸಾಧನೆಗಾಗಿ ಪುನೀತ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಡೆದುಕೊಂಡಿದ್ದಾರೆ.
ಮಿಂಚಿದ ಅಲ್ಲು ಅರ್ಜುನ್, ಸೂರ್ಯ:ಟಾಲಿವುಡ್ನ ಪ್ರಸಿದ್ಧ ನಟ ಅಲ್ಲು ಅರ್ಜುನ್ ಮತ್ತು ತಮಿಳಿನ ಸೂರ್ಯ ಖುಷಿಗೆ ಒಂದಲ್ಲ - ಎರಡಲ್ಲ ಹಲವು ಕಾರಣಗಳಿವೆ. ಭಾನುವಾರ ನಡೆದ 67 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2022 ರಲ್ಲಿ ಅವರ ಅಭಿನಯದ ಚಲನಚಿತ್ರಗಳಾದ ಪುಷ್ಪ: ದಿ ರೈಸ್ ಮತ್ತು ಸೂರರೈ ಪೊಟ್ರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಹಾಗೂ ತೆಲುಗು ವಿಭಾಗದ ಅಡಿಯಲ್ಲಿ, ಪುಷ್ಪ: ದಿ ರೈಸ್‌ನಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಮುಡಿಗೇರಿದೆ. ಇನ್ನು ತಮಿಳು ವಿಭಾಗದಲ್ಲಿ ಸೂರ್ಯ ಅವರ ಸೂರರೈ ಪೊಟ್ರು ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಕಿರೀಟ ಒಲಿದು ಬಂದಿದೆ.
ಸೂರ್ಯಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬಜೆಟ್ ಏರ್‌ಲೈನ್ ಏರ್ ಡೆಕ್ಕನ್ ಅನ್ನು ಸ್ಥಾಪಿಸಿದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನವನ್ನು ಆಧರಿಸಿದ ಚಿತ್ರದಲ್ಲಿನ ಅಭಿನಯಕ್ಕಾಗಿ ಸೂರ್ಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದು ಗಮನ ಸೆಳೆದಿದ್ದಾರೆ.
ತೆಲುಗು ಚಿತ್ರ ಲವ್ ಸ್ಟೋರಿಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ತಮಿಳು ಚಿತ್ರರಂಗದಲ್ಲಿ ಸೂರ್ಯ ಜೊತೆ ನಟಿಸಿದ ಜೈ ಭೀಮ್ ಚಿತ್ರದಲ್ಲಿನ ಪಾತ್ರಕ್ಕಾಗಿ ಲಿಜೋಮೋಲ್ ಜೋಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡದ ತಾರೆಯರ ಪೈಕಿ ಬಡವ ರಾಸ್ಕಲ್ ಚಿತ್ರಕ್ಕಾಗಿ ಧನಂಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2020ರ ಮಲಯಾಳಂ ಚಿತ್ರ ಅಯ್ಯಪ್ಪನುಂ ಕೊಶಿಯುಮ್‌ಗಾಗಿ ಬಿಜು ಮೆನನ್ ಅವರಿಗೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ನೀಡಲಾಗಿದೆ.
ಪ್ರಶಸ್ತಿ ಪಡೆದ ಕನ್ನಡ ಸಿನಿಮಾ ಹಾಗೂ ನಟರು:ಝಗಮಗಿಸುವ ವೇದಿಕೆಯಲ್ಲಿ ಫಿಲ್ಮ್‌ಫೇರ್ ಸಮಾರಂಭ ಜರುಗಿದ್ದು ನಟರಾಕ್ಷಸ ಧನಂಜಯ್, ರಾಜ್ ಬಿ. ಶೆಟ್ಟಿ, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಮುಂತಾದವರು ಪ್ರಶಸ್ತಿಯನ್ನು ಪಡೆದುಕೊಂಡರು.
- ಅತ್ಯುತ್ತಮ ನಟ (ಪುರುಷ) - ಧನಂಜಯ್ (ಬಡವ ರಾಸ್ಕಲ್)
- ಅತ್ಯುತ್ತಮ ನಟಿ (ಮಹಿಳೆ) - ಯಜ್ಞಾ ಶೆಟ್ಟಿ (ಆ್ಯಕ್ಟ್ 1978)
- ಅತ್ಯುತ್ತಮ ಚಲನಚಿತ್ರ - ಆ್ಯಕ್ಟ್ 1978
- ಅತ್ಯುತ್ತಮ ನಿರ್ದೇಶಕ - ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
- ಅತ್ಯುತ್ತಮ ಪೋಷಕ ನಟ (ಪುರುಷ) - ಬಿ. ಸುರೇಶ (ಆ್ಯಕ್ಟ್ 1978)
- ಅತ್ಯುತ್ತಮ ಪೋಷಕ ನಟಿ (ಮಹಿಳೆ) - ಉಮಾಶ್ರೀ (ರತ್ನನ್ ಪ್ರಪಂಚ)
- ಅತ್ಯುತಮ ಸಂಗೀತ ನಿರ್ದೇಶಕ ವಾಸುಕಿ ವೈಭವ್ (ಬಡವ ರಾಸ್ಕಲ್)
- ಅತ್ಯುತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆ್ಯಕ್ಟ್ 1978)
- ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) - ರಘು ದೀಕ್ಷಿತ್- ಮಲೆ ಮಳೆ ಮಳೆ (ನಿನ್ನ ಸನಿಹಕೆ)
- ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ) - ಅನುರಾಧ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗತ್ತಿ)
- ಅತ್ಯುತ್ತಮ ಛಾಯಾಗ್ರಹಣ - ಶ್ರೀಶ ಕುದುವಳ್ಳಿ (ರತ್ನನ್ ಪ್ರಪಂಚ)
- ಅತ್ಯುತ್ತಮ ನೃತ್ಯ ಸಂಯೋಜನೆ - ಜಾನಿ ಮಾಸ್ಟರ್ - ಫೀಲ್ ದಿ ಪವರ್ (ಯುವರತ್ನ)
- ಅತ್ಯುತಮ ನಟಿ (ಕ್ರಿಟಿಕ್ಸ್) ಮಿಲನ ನಾಗರಾಜ್ (ಲವ್ ಮಾಕ್ಟೇಲ್)
- ಅತ್ಯುತ್ತಮ ನಟ (ಕ್ರಿಟಿಕ್ಸ್) ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್)
- ಜೀವಮಾನ ಸಾಧನೆ ಪ್ರಶಸ್ತಿ - ಪುನೀತ್ ರಾಜ್‌ಕುಮಾರ್