ಬೆಂಗಳೂರು: ಪುನೀತ್ ರಾಜ್‍ಕುಮಾರ್ ಒಬ್ಬ ಸ್ಟಾರ್ ನಟನಾಗಿರದೇ ಸಾಮಾಜಿಕ ಕಳಕಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎಂಬ ಕನಸುಗಳನ್ನು ಕಂಡಿದ್ದರು. ಅದರಲ್ಲಿ ಈ ಗಂಧದ ಗುಡಿ ಚಿತ್ರವೂ ಒಂದು. ನಿನ್ನೆ ಸಂಜೆ ಅರಮನೆ ಮೈದಾನದಲ್ಲಿ ನಡೆದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷಾಂತರ ಅಭಿಮಾನಿಗಳು, ಉದ್ಯಮಿಗಳು, ಜನಪ್ರತಿನಿಧಿಗಳು, ಗಣ್ಯರು ಮತ್ತು ಬಹಭಾಷಾ ಚಿತ್ರಂಗದ ತಾರೆಗಳ ಸಮಾಗಮ ಆಗಿತ್ತು. ವೇದಿಯಲ್ಲಿ ಗಣ್ಯರು ಅಪ್ಪು ಬಗ್ಗೆ ಗುಣಗಾನ ಮಾಡಿದರು.
ನಟ ಸೂರ್ಯ ಮಾತನಾಡಿ, ನನ್ನ ಆತ್ಮೀಯ ಗೆಳೆಯ ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲೇ ನಮ್ಮ ಜೊತೆ ಗಾಳಿಯಲ್ಲಿ ಇದ್ದಾರೆ. ಅದು ನನಗೆ ಫೀಲ್ ಆಗುತ್ತಿದೆ. ನಾವಿಬ್ಬರು ನಮ್ಮ ತಾಯಿಂದಿರ ಹೊಟ್ಟೆಯಲ್ಲಿ ಇರಬೇಕಾದರೆ ಮೀಟ್ ಮಾಡಿದ್ವಿ. ಬಳಿಕ ಮೈಸೂರಿನ ಸುಜಾತ ಹೋಟೆಲ್ನಲ್ಲಿ ಮೀಟ್ ಮಾಡಿದ್ವಿ. ಆ ಭೇಟಿ ನಂತರ ಸಾಕಷ್ಟು ಬಾರಿ ಭೇಟಿಯಾಗಿದ್ದೇವೆ.
ಸರಳತೆ, ಗೆಳತನ ಹಾಗೂ ಸ್ಟಾರ್ ಐಕಾನ್ ಆದರೂ ಸಮಾಜಕ್ಕೆ ಅವರು ಮಾಡಿರುವ ಸಹಾಯಗಳನ್ನು ಮರೆಯಲು ಸಾಧ್ಯವಿಲ್ಲ. ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿದ್ದಾರೆ. ಜೀವನದಲ್ಲಿ ಹೇಗೆ ಬದುಕಬೇಕು ಅನ್ನೋದನ್ನು ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರೋದು ನನಗೂ ಹೆಮ್ಮೆ ಎಂದು ಸೂರ್ಯ ತಿಳಿಸಿದರು.
ನಟ ರಮೇಶ್ ಅರವಿಂದ್ ಮಾತನಾಡಿ, ಹುಟ್ಟಿದ ಮೇಲೆ ನಾವೆಲ್ಲ ಒಂದು ದಿನ ಹೋಗಲೇಬೇಕು. ಆದರೆ ಅಪ್ಪು ಇಲ್ಲ ಅನ್ನೋದು ನಮ್ಮ ತಲೆಗೆ ಗೊತ್ತಿದ್ದರೂ, ಮನಸ್ಸು ಅದನ್ನು ಅರಗಿಸಿಕೊಳ್ಳುತ್ತಿಲ್ಲ. ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವನ್ನು ಮರೆಯೋದು ಬಹಳ ಕಷ್ಟ. ಪುನೀತ್ ಇಹಲೋಕ ತ್ಯಜಿಸಿ ಒಂದು ವರ್ಷ ಆದ್ರೂ ಈಗಲೂ ಅದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಬಾರದಿತ್ತಲ್ವಾ ಅಂತಾ ಅನಿಸುತ್ತೆ. ಏಕಂದ್ರೆ ಅವರು ಅಷ್ಟೊಂದು ಖುಷಿ ಕೊಟ್ಟಿದ್ರು, ಒಳ್ಳೆ ಕೆಲಸ ಮಾಡಿದ್ರು. ಅವರು ಬಂದ್ರೆ ಚಿತ್ರರಂಗವನ್ನು ಆಳ್ತಾರೆ ಎಂದಿದ್ದೆ, ಅದರಂತೆ ಆಡಳಿತ ನಡೆಸಿ ಹೋದ್ರು ಎಂದು ಭಾವುಕರಾದರು.