ಮಣಿಪುರ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮಣಿಪುರ ಹಿಂಸಾಚಾರ ಸಂದರ್ಭ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿಸಿರುವ ವಿಡಿಯೋ ವೈರಲ್ ಆಗಿ, ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾನ್ಯ ಜನರೂ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿ ಗಣ್ಯರು ಸಹ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ: ಮಣಿಪುರ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ''ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ಭಯಾನಕವಾಗಿದೆ ಮತ್ತು ನನ್ನನ್ನು ಬೆಚ್ಚಿಬೀಳಿಸಿದೆ. ಆ ಮಹಿಳೆಯರಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪರಾಧಿಗಳು ಅತ್ಯಂತ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ'' ಎಂದು ನಟಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್: ಟ್ವಿಟರ್ನಲ್ಲಿ ದೊಡ್ಡ ಪೋಸ್ಟ್ ಶೇರ್ ಮಾಡಿರುವ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ''ಪ್ರತಿ ಬಾರಿಯೂ ನಮ್ಮ ಮುಗ್ಧ ತಾಯಂದಿರು, ಸಹೋದರಿಯರು ಅಮಾನವೀಯ, ಅನಾಗರಿಕ ಕೃತ್ಯಗಳಿಗೆ ಬಲಿಪಶುಗಳಾಗುತ್ತಾರೆ. ಒಬ್ಬ ಭಾರತೀಯನಾಗಿ, ಮನುಷ್ಯನಾಗಿ ನಾನು ಪ್ರತಿ ಬಾರಿಯೂ ಛಿದ್ರವಾಗಿದ್ದೇನೆ. ನನಗೆ ನಾಚಿಕೆಯಾಗುತ್ತಿದೆ. ನನ್ನ ಅಸಹಾಯಕತೆಗೆ ನಾನು ತುಂಬಾ ತಪ್ಪಿತಸ್ಥನಾಗಿದ್ದೇನೆ. ಓರ್ವ ಭಾರತೀಯನಾಗಿ, ಸಾಮಾನ್ಯ ಮನುಷ್ಯನಾಗಿ ಪ್ರತಿ ಬಾರಿಯೂ ಛಿದ್ರಗೊಂಡಿದ್ದೇನೆ. ನನಗೆ ನಾಚಿಕೆಯಾಗುತ್ತಿದೆ. ನನ್ನ ಅಸಹಾಯಕತೆ ಬಗ್ಗೆ ಪಶ್ಚಾತ್ತಾಪವಿದೆ. ಓ ಮಣಿಪುರ, ನಾನು ಪ್ರಯತ್ನಿಸಿದೆ, ಆದರೆ ನಾನು ವಿಫಲನಾದೆ. ನಾನು ನನ್ನ ಕೆಲಸದ ಮೂಲಕ ಅವರ ದುರಂತ ಕಥೆಗಳನ್ನು ಹೇಳಬಲ್ಲೆ ಅಷ್ಟೇ. ಆದರೆ ಅದು ಬಹಳ ತಡವಾಗುತ್ತದೆ. ನಾವೆಲ್ಲರೂ ಆಯ್ದ ಮತ್ತು ಅತಿ ಸ್ಪರ್ಧಾತ್ಮಕ ರಾಜಕೀಯದ ಬಲಿಪಶುಗಳು. ನಾವು ಅತಿಧರ್ಮದ ಬಲಿಪಶುಗಳು. ನಾವು, ಭಾರತದ ಜನರು, ಬಲಿಪಶುಗಳು. ಮುಕ್ತ ಭಾರತದಲ್ಲಿ ಜೀವಿಸುವ ಹಕ್ಕಿಲ್ಲ. ಮತ್ತು ನಾವು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಇದು ನನಗೆ ಬೇಕಾದ ಸ್ವಾತಂತ್ರ್ಯವಲ್ಲ. ಇದು ನನಗೆ ಬೇಕಾದ ಪ್ರಜಾಪ್ರಭುತ್ವವಲ್ಲ. ನಮ್ಮದು ವಿಫಲ ಸಮಾಜ. ಕ್ಷಮಿಸಿ, ನನ್ನ ಸಹೋದರಿಯರೇ. ಕ್ಷಮಿಸಿ, ನನ್ನ ತಾಯಂದಿರೇ. ಭಾರತ ಮಾತೆ ಕ್ಷಮಿಸಿ'' ಎಂದು ಬರೆದಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್: ''ಮಣಿಪುರದ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋ ನೋಡಿ ಬೆಚ್ಚಿಬಿದ್ದೆ. ಬಹಳ ಅಸಹ್ಯವಾಯಿತು. ಇಂತಹ ಭಯಾನಕ ಕೃತ್ಯವನ್ನು ಎಸಗಲು ಮತ್ತೊಮ್ಮೆ ಯಾರೂ ಕೂಡ ಯೋಚನೆ ಮಾಡದಂತಹ ಶಿಕ್ಷೆ ಈ ಪ್ರಕರಣದ ಅಪರಾಧಿಗಳಿಗೆ ಸಿಗಲಿದೆ ಎಂದು ನಾನು ನಂಬಿದ್ದೇನೆ'' ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.