ಕೋಯಿಕ್ಕೋಡ್ (ಕೇರಳ): ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕ, ಎಐಸಿಸಿ ಸದಸ್ಯ ಮತ್ತು ಉದ್ಯಮಿ ಪಿ.ವಿ ಗಂಗಾಧರನ್ ನಿಧನರಾಗಿದ್ದಾರೆ. 80ರ ಹರೆಯದ ನಿರ್ಮಾಪಕ ಇಂದು ಬೆಳಗ್ಗೆ 6:30ರ ಹೊತ್ತಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗಂಗಾಧರನ್ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೀಗ ಇಹಲೋಕ ತ್ಯಜಿಸಿದ್ದು, ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಸಂಭವಿಸಿದೆ.
20ಕ್ಕೂ ಹೆಚ್ಚು ಸಿನಿಮಾಗಳ ಸಿರ್ಮಾಣ: ಉದ್ಯಮಿ ಪಿ.ವಿ ಗಂಗಾಧರನ್ ಅವರು ಗೃಹಲಕ್ಷ್ಮಿ ಪ್ರೊಡಕ್ಷನ್ಸ್‌ನ ಸಂಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಂಗಡಿ, ಅಹಿಂಸಾ, ಒರು ವಡಕ್ಕನ್ ವೀರಗಾಥ, ಕಟ್ಟಾತೆ ಕಿಲಿಕ್ಕೂಡು, ಎನ್ನು ಸ್ವಂತಂ ಜಾನಕಿಕುಟ್ಟಿ, ತೂವಲ್ ಕೊಟ್ಟಾರಂ, ಶಾಂತಮ್ ಮತ್ತು ಅಚುವಿಂತೆ ಅಮ್ಮ ಸೇರಿದಂತೆ 20ಕ್ಕೂ ಹೆಚ್ಚು ಮಲಯಾಳಂ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸುಜಾತ (1977) ಪಿ.ವಿ ಗಂಗಾಧರನ್ ನಿರ್ಮಾಣದ ಮೊದಲ ಸಿನಿಮಾ, ಜಾನಕಿ ಜಾನೆ (2023) ಅವರ ಕೊನೆಯ ಚಿತ್ರ.
ನಿರ್ಮಾಪಕರ ಸಿನಿಮಾ ಕೊಡುಗೆಗಳಿಗೆ ಸಂದ ಗೌರವ:ಪಿ.ವಿ ಗಂಗಾಧರನ್ ಮಲೆಯಾಳಂ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಸಿನಿಮಾ ಮೇಲಿನ ಆಸಕ್ತಿ ಕೂಡ ಬಹಳ ಹೆಚ್ಚೇ ಇತ್ತು. ನಿರ್ಮಾಪಕರ ಸಿನಿಮಾ ಕೊಡುಗೆಗಳನ್ನು ಗುರುತಿಸಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವ ಸಂದಿವೆ.
ಪಿ.ವಿ ಗಂಗಾಧರನ್ ನಿರ್ಮಾಣದ ಕಣಕ್ಕಿನವು 1997 ರಲ್ಲಿ ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರತಿಷ್ಟಿತ ನರ್ಗೀಸ್ ದತ್ ಪ್ರಶಸ್ತಿಯನ್ನು ಸ್ವೀಕರಿಸಿತು. 2000 ರಲ್ಲಿ ಶಾಂತಮ್ ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆ ಆಯಿತು. ಅವರ ಇತರ ಯಶಸ್ವಿ ಸಿನಿಮಾಗಳಾದ ಒರು ವಡಕ್ಕನ್ ವೀರಗಾಥ (1986), ಕಣಕ್ಕಿನವು (1997), ವೀಂದುಮ್ ಚಿಲ ವೀಟ್ಟುಕಾರ್ಯಂಗಲ್ (1999), ಅಚ್ಚುವಿಂತೆ ಅಮ್ಮ (2005) ಮತ್ತು ನೋಟ್ ಬುಕ್ (2006) ರಾಜ್ಯ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.
ಇದನ್ನೂ ಓದಿ:'ಕಲ್ಕಿ 2898 ಎಡಿ' ಬಿಗ್ ಬಿ ಫಸ್ಟ್ ಲುಕ್: ಚಿತ್ರ ನಿರ್ಮಾಪಕರಿಗೆ ಅಮಿತಾಭ್ ಬಚ್ಚನ್ ಕೃತಜ್ಞತೆ
ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಯಶಸ್ವಿ ವೃತ್ತಿಜೀವನದ ಜೊತೆ ಜೊತೆಗೆ, ಗಂಗಾಧರನ್ ಅವರು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟದಲ್ಲಿ ಉಪಾಧ್ಯಕ್ಷರಾಗಿ ಪ್ರಮುಖ ಸ್ಥಾನವನ್ನು ಹೊಂದಿದ್ದರು. ಅಲ್ಲದೇ, ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಹಿರಿಯ ಸಹೋದರ ಪಿ ವಿ ಚಂದ್ರನ್ ಅವರು 'ಮಾತೃಭೂಮಿ' ಸಂಸ್ಥೆಯ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ಪಿ.ವಿ ಗಂಗಾಧರನ್ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದು, ಕುಟುಂಬದಲ್ಲಿ ಕಣ್ಣೀರಿನ ವಾತಾವರಣ ಮನೆ ಮಾಡಿದೆ. ಖ್ಯಾತ ನಿರ್ಮಾಪಕನ ನಿಧನಕ್ಕೆ ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:ಚೆಂದದ ಗೌನ್ನಲ್ಲಿ ಅಂದದ ಗೊಂಬೆಯರು: ರಾಕುಲ್, ಅನನ್ಯಾ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್