ಬೆಂಗಳೂರು :ಕನ್ನಡ ಚಿತ್ರರಂಗದಲ್ಲಿ ಒರಟು ಮಾತಿನಿಂದಲೇ ಅಭಿಮಾನಿಗಳಿಗೆ ಇಷ್ಟ ಆಗುತ್ತಿದ್ದ ನಟ ಅಂದರೆ ಅದು ರೆಬಲ್ ಸ್ಟಾರ್ ಅಂಬರೀಶ್. ಚಿತ್ರರಂಗದ ಹಿರಿಯಣ್ಣನಾಗಿ ಕನ್ನಡ ಚಿತ್ರರಂಗದ ಯಜಮಾನನಾಗಿದ್ದ ಅಂಬರೀಶ್ ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅಂಬರೀಶ್ ಮಾಡಿರೋ ಆ ಒಳ್ಳೆ ಕೆಲಸಗಳು ಹಾಗೂ ಸಿನಿಮಾಗಳ ಮೂಲಕ ನೆನಪಾಗುತ್ತಾರೆ. ಇದೀಗ ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ನಾಮಕರಣ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದೆ.
ಈ ಕುರಿತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ. ಮಾ ಹರೀಶ್ ಹಾಗೂ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಇಂದು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿದರು. ಕನ್ನಡ ಚಿತ್ರರಂಗದಲ್ಲಿ ಅಪಾರ ಕೊಡುಗೆ ನೀಡಿರುವ ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರಿಗೆ, ರಾಂ ನಾರಾಯಣ ಚಲರಾಮ್ ಕಾಲೇಜ್‌ನಿಂದ ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ರಸ್ತೆವರೆಗೆ ನಾಮಕರಣ ಮಾಡಬೇಕುಬ ಎಂಬುದು ಚಿತ್ರೋದ್ಯಮದವರೆಲ್ಲರ ಒತ್ತಾಸೆಯಾಗಿದೆ.
ಬಿಬಿಎಂಪಿ ಆಯುಕ್ತರಿಗೆ ಭಾ ಮಾ ಹರೀಶ್ ಮನವಿ.. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅಪಾರ ಕೊಡುಗೆ ನೀಡಿರುವ ಸಾಧಕರುಗಳಾದ ಪದ್ಮಭೂಷಣ ಡಾ. ರಾಜ್‌ಕುಮಾರ್, ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ಪವರ್ ಸ್ಟಾರ್ ಶ್ರೀ. ಪುನೀತ್ ರಾಜ್‌ಕುಮಾರ್, ಇವರುಗಳ ಜ್ಞಾಪಕಾರ್ಥವಾಗಿ ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಿಗೆ ಅವರ ಹೆಸರನ್ನು ಘನ ಸರ್ಕಾರವು ಈಗಾಗಲೇ ನಾಮಕರಣ ಮಾಡಿರುವುದು ಇಡೀ ಚಿತ್ರೋದ್ಯಮಕ್ಕೆ ಹೆಮ್ಮೆಯ ವಿಚಾರವಾಗಿದೆ. ಈಗ ಅಂಬರೀಶ್ ಹೆಸರು ಇಡುವಂತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.