ಹೈದರಾಬಾದ್: ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಸೇರಿದತೆ ದೊಡ್ಡ ತಾರಾ ಬಳಗ ಹೊಂದಿರುವ ಬಾಲಿವುಡ್ನ ವರ್ಷದ ಬಹುನಿರೀಕ್ಷಿತ 'ಫೈಟರ್' ಚಿತ್ರದ ಟ್ರೈಲರ್ ಸೋಮವಾರ ಅನಾವರಣಗೊಂಡಿದೆ. 3 ನಿಮಿಷ 9 ಸೆಕೆಂಡು ಅವಧಿಯ ಟ್ರೈಲರ್ ಇದಾಗಿದ್ದು, ಸಿನಿ ರಸಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭಯೋತ್ಪಾದನೆ ವಿರುದ್ಧ ಯುದ್ಧ ಸಾರುವ ಭಾರತೀಯ ವಾಯುಸೇನೆಯ ವೀರರ ಕಥೆ ಸಾರುವ ಚಿತ್ರ ಇದಾಗಿರಲಿದ್ದು, ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಯುದ್ಧ ವಿಮಾನಗಳ ಒಂದೊಂದು ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ.
ಐಮ್ಯಾಕ್ಸ್ 3ಡಿ ವರ್ಷನ್ನಲ್ಲೂ ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕನ ಕುತೂಹಲ ಇಮ್ಮಡಿಗೊಳಿಸಿದೆ. ಮೂರು ನಿಮಿಷ ಈ ಟ್ರೈಲರ್ನಲ್ಲಿ ಮೈನವಿರೇಳಿಸುವಂತಹ ಸಾಹಸ, ಯುದ್ಧ ವಿಮಾನಗಳ ಹಾರಾಟ, ಅವುಗಳ ನಡುವಿನ ಸೆಣೆಸಾಟ ಮತ್ತು ರೋಚಕ ಸನ್ನಿವೇಶಗಳು ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸುವಂತಿವೆ. ಪುಲ್ವಾಮಾ ದಾಳಿಯ ಸುತ್ತ ಹೆಣೆದಿರುವ ಚಿತ್ರ ಇದಾಗಿರಲಿದ್ದು, ಟ್ರೈಲರ್ ನೋಡಿದರೆ ದೇಶಾಭಿಮಾನ, ಸೈನಿಕರ ಸಾಧನೆ ಸಾರುವ ಕಥೆ ಎಂದು ಮನದಟ್ಟು ಮಾಡಿಕೊಳ್ಳಬಹುದು. ಸಂಭಾಷಣೆ, ಛಾಯಾಗ್ರಹಣ ಕೂಡ ಅದ್ಭುತವಾಗಿ ಮೂಡಿ ಬಂದಿದ್ದು, ನೆಟಿಜನ್ಗಳು ಹೃತಿಕ್ ರೋಷನ್ ಮತ್ತು ಅವರ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಶ್ಲಾಘಿಸಿದ್ದಾರೆ.
ಫೈಟರ್ ಟ್ರೈಲರ್ ಪರಿಪೂರ್ಣತೆಯಾಗಿದೆ. ರೋಚಕ ಸನ್ನಿವೇಶಗಳಲ್ಲಿ ಹೃತಿಕ್ ಅವರನ್ನು ಕಾಣುವುದೇ ಅದ್ಭುತ. ಪ್ರತಿ ಸೀನ್ಗಳು ದೇಶಾಭಿಮಾನವನ್ನು ತುಂಬಿಸುತ್ತವೆ. ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದೇವೆ. ಸೈನಿಕರ ಕಥೆಯುಳ್ಳ ಇಂತಹ ಚಿತ್ರಗಳನ್ನು ಥಿಯೇಟರ್ನಲ್ಲಿ ಕಾಣಬೇಕು. ಚಿತ್ರಕ್ಕೆ ಶುಭವಾಗಲಿ ಅಂತೆಲ್ಲ ನೆಟಿಜನ್ಗಳು ಕಾಮೆಂಟ್ ಮಾಡಿದ್ದಾರೆ.