ಬ್ಲಾಕ್‌ಬಸ್ಟರ್ ಮೂವಿ 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರತಂಡ ಕಳೆದ ವಾರ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದ ಟೀಸರ್ ಅನ್ನು ಅನಾವರಣಗೊಳಿಸಿದ್ದು, ಮಾತ್ರವಲ್ಲದೇ ಪ್ರಮುಖ ತಾರೆಯರಾದ ದೀಪಿಕಾ, ಹೃತಿಕ್, ಅನಿಲ್, ಕರಣ್ ಸಿಂಗ್ ಗ್ರೋವರ್ ಅವರ ಕ್ಯಾರೆಕ್ಟರ್ ಪೋಸ್ಟರ್‌ಗಳನ್ನು ಸಹ ಹಂಚಿಕೊಂಡಿತ್ತು. ಇದೀಗ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಇಂದು ದೀಪಿಕಾ ಪಡುಕೋಣೆ 'ಫೈಟರ್' ಚಿತ್ರದ 'ಶೇರ್ ಖುಲ್ ಗಯೇ' ಹಾಡಿನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. 'ನಾವು ಪಾರ್ಟಿಯನ್ನು ಆರಂಭಿಸೋಣ. 'ಶೇರ್ ಖುಲ್ ಗಯೇ' ಹಾಡು ನಾಳೆ ಬಿಡುಗಡೆಯಾಗಲಿದೆ' ಎಂದು ಬರೆದುಕೊಂಡಿದ್ದಾರೆ. ಹೃತಿಕ್ ರೋಷನ್ ಅವರ ನೃತ್ಯದಿಂದ ಹಾಡು ಪ್ರಾರಂಭವಾಗುತ್ತದೆ. ಅದರ ನಂತರ ದೀಪಿಕಾ ಅವರ ಒಂದು ನೋಟವನ್ನು ಹಾಡಿನಿಂದ ತೋರಿಸಲಾಗಿದೆ. ಇಬ್ಬರೂ ಸ್ಟಾರ್ಗಳು ತಮ್ಮ ಪಾರ್ಟಿ ಲುಕ್ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಹೃತಿಕ್-ದೀಪಿಕಾ ಪಾರ್ಟಿ ಸಾಂಗ್ ನಾಳೆ ಬಿಡುಗಡೆ ಆಗಲಿದೆ.
ಇತ್ತೀಚೆಗೆ ಅನಾವರಣಗೊಂಡಿರುವ ಟೀಸರ್ ಸಖತ್ ಸದ್ದು ಮಾಡುತ್ತಿದೆ. ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ (ಪ್ಯಾಟಿ) ಆಗಿ ಹೃತಿಕ್ ರೋಷನ್, ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ (ಮಿನ್ನಿ) ಆಗಿ ದೀಪಿಕಾ ಪಡುಕೋಣೆ ಮತ್ತು ಕಮಾಂಡಿಂಗ್ ಆಫೀಸರ್ ಆಗಿ ಅನಿಲ್ ಕಪೂರ್, ಗ್ರೂಪ್ ಕ್ಯಾಪ್ಟನ್ ಆಗಿ ರಾಕೇಶ್ ಜೈ ಸಿಂಗ್ ನಟಿಸಿದ್ದಾರೆ. ಇವರೆಲ್ಲರ ಪಾತ್ರ ಪರಿಚಯ ಟೀಸರ್ನಲ್ಲಿದೆ.