ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳಿಂದ ಮರಿ ಟೈಗರ್ ಆಗಿ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ ವಿನೋದ್ ಪ್ರಭಾಕರ್. ಸದ್ಯ ಫೈಟರ್ ಸಿನಿಮಾ ರಿಲೀಸ್ ಖುಷಿಯಲ್ಲಿರೋ ಮರಿ ಟೈಗರ್ ರೊಮ್ಯಾಂಟಿಕ್ ಮೂಡ್ನಲ್ಲಿದ್ದಾರೆ. ನಿರ್ದೇಶಕ ಉಮೇಶ್ ಆಕ್ಷನ್ ಕಟ್ ಹೇಳಿರುವ ಫೈಟರ್ ಚಿತ್ರಕ್ಕಾಗಿ ಸಾಹಿತಿ ಕವಿರಾಜ್ ಅವರು ಬರೆದಿರುವ "ಐ ವಾನ್ನ ಫಾಲೋ ಯು" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್ ಜಿ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಸೌತ್ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುರುರಂಜನ್ ಶೆಟ್ಟಿ ಈ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಯಿಸಿದರು.
ಚಿತ್ರದ ಮುಹೂರ್ತಕ್ಕೆ ಬಂದು ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ನಾಯಕ ವಿನೋದ್ ಪ್ರಭಾಕರ್, ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ "ಫೈಟರ್" ಈ ಸಿನಿಮಾ. ನಿರ್ಮಾಪಕ ಸೋಮಶೇಖರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಅಷ್ಟೇ ಚೆನ್ನಾಗಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಇಂದು ಬಿಡುಗಡೆಯಾದ ಹಾಡಿನ ಚಿತ್ರೀಕರಣ ಮಾರ್ಚ್ನಲ್ಲಿ ಪಾಂಡಿಚೇರಿಯಲ್ಲಿ ಆಗಿದ್ದು, ಅಲ್ಲಿನ ಬಿಸಿಲು ತಡೆಯುವುದೇ ಕಷ್ಟ. ಆದರೆ, ಎಲ್ಲರ ಶ್ರಮದಿಂದ ಈ ಹಾಡು ಚೆನ್ನಾಗಿ ಬಂದಿದೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಈ ಚಿತ್ರ ದೊಡ್ಡ ಯಶಸ್ಸು ತಂದು ಕೊಡಲಿ. ಅವರಿಂದ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿ ಎಂದು ಹಾರೈಸಿದರು.
ಇನ್ನು ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ಈ ಹಾಡಿನ ಮೊದಲ ಪದ "ಐ ವಾನ್ನ ಫಾಲೋ" ಎಂಬುದನ್ನು ನಿರ್ದೇಶಕರು ಹೇಳಿದಾಗ "ಫಾಲೋ" ಎಂಬ ಪದದಿಂದಲೇ ಈ ಹಾಡು ಆರಂಭವಾಯಿತು. ವಿಶೇಷವೆಂದರೆ, ಈ ಹಾಡಿನಲ್ಲಿ ಬರುವ ಪದಗಳಿಗೆ ಎರಡು ಅರ್ಥಗಳಿದೆ. ಕವಿರಾಜ್ ಅದ್ಭುತವಾಗಿ ಹಾಡು ಬರೆದಿದ್ದಾರೆ. ಚೈತ್ರ ಸೊಗಸಾಗಿ ಹಾಡಿದ್ದಾರೆ ಎಂದು ಗುರುಕಿರಣ್ ಮೆಚ್ಚುಗೆ ವ್ಯಕ್ತಪಡಿಸಿದರು.