ಸ್ನೇಹ ಬಾಂಧವ್ಯವನ್ನು ಸುಂದರವಾಗಿ ಹೆಣೆದಿರುವ ಬಾಲಿವುಡ್ ಸೂಪರ್‌ಹಿಟ್ ಸಿನಿಮಾ 'ತ್ರೀ ಈಡಿಯಟ್ಸ್'. ನಟರಾದ ಅಮೀರ್ ಖಾನ್, ಶರ್ಮನ್ ಜೋಶಿ ಮತ್ತು ಆರ್.ಮಾಧವನ್ ಅಭಿನಯಿಸಿರುವ ಸಿನಿಮಾ ಇದಾಗಿತ್ತು. ಚಿತ್ರದ ಹಾಡುಗಳಂತೂ ಇಂದಿಗೂ ಸಿನಿಮಾಪ್ರಿಯರ ಹಾಟ್ ಫೇವರಿಟ್ ಆಗಿವೆ. ಇದೀಗ ಈ ಮೂವರು 14 ವರ್ಷದ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು 'ತ್ರೀ ಈಡಿಯಟ್ಸ್' ಮುಂದುವರಿದ ಭಾಗಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಶರ್ಮನ್ ಜೋಶಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, 'ಕಂಗ್ರಾಜುಲೇಷನ್ಸ್' ಸಿನಿಮಾವನ್ನು 3 ಈಡಿಯಟ್ಸ್ ಪ್ರೊಮೋಟ್ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಈ ದೃಶ್ಯದಲ್ಲಿ ಮೂವರು ನಟರು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಕೆಂಪು ಬಣ್ಣದ ಸಮವಸ್ತ್ರ ಧರಿಸಿದ್ದಾರೆ.
'ಕಂಗ್ರಾಜುಲೇಷನ್ಸ್'ಗೆ ಥ್ಯಾಂಕ್ಸ್: ವಿಡಿಯೋದಲ್ಲಿ ಶರ್ಮನ್ ಅವರು ಚಿತ್ರದ ಬಗ್ಗೆ ಮಾತನಾಡುತ್ತಿದ್ದರು. ಅಷ್ಟರಲ್ಲಿ ಮಾಧವನ್ ಬಂದು ಅವರ ಮಾತಿಗೆ ಅಡ್ಡಿಪಡಿಸಿದರು. ಅವರು ಮತ್ತೆ ತಮ್ಮ ಚಿತ್ರದ ಬಗ್ಗೆ ಮಾತನಾಡಲು ಪ್ರಾರಂಭಿಸುವಾಗ ಅಮೀರ್ ಖಾನ್ ಎಂಟ್ರಿ ಕೊಟ್ಟರು. ಬಳಿಕ ಚಿತ್ರದ ಶೀರ್ಷಿಕೆಯ ಬಗ್ಗೆ ಇಬ್ಬರು ಗೊಂದಲಕ್ಕೊಳಗಾದರು ಮತ್ತು ಶರ್ಮನ್ ಅವರು ತಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ಭಾವಿಸಿ ಥ್ಯಾಂಕ್ಸ್ ಹೇಳಿದರು. ಇದು ಅಭಿಮಾನಿಗಳ ನಗುವಿಗೆ ಕಾರಣವಾಯಿತು.
ಇದನ್ನೂ ಓದಿ:5,000 ಕೋಟಿ ಪ್ರೀತಿ, 3,000 ಕೋಟಿ ಮೆಚ್ಚುಗೆ, 2 ಬಿಲಿಯನ್ ಸ್ಮೈಲ್ಸ್ .. ಏನಿದು ಶಾರುಖ್ ಕೊಟ್ಟ ಉತ್ತರ!
'ಗೋಲ್ಮಾಲ್' ನಟ ವಿಡಿಯೋವನ್ನು ಹಂಚಿಕೊಂಡ ಕೂಡಲೇ ನೆಟ್ಟಿಗರು ಕೆಂಪು ಹೃದಯಗಳು ಮತ್ತು ಬೆಂಕಿಯ ಇಮೋಜಿ ಕಳುಹಿಸಿ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ. ಅಲ್ಲದೇ "ಮೂವರನ್ನು ಒಟ್ಟಿಗೆ ಕಂಡು ಬಹಳ ಸಂತೋಷವಾಯಿತು. ನಾವು 'ತ್ರಿ ಈಡಿಯಟ್ಸ್ ಪಾರ್ಟ್ 2' ಗಾಗಿ ಕಾಯುತ್ತಿದ್ದೇವೆ" ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಅತಿ ಹೆಚ್ಚು ಜನರು ಒಪ್ಪಿಗೆಯನ್ನಿತ್ತು ಪ್ರತಿಕ್ರಿಯಿಸಿದ್ದಾರೆ. ಗೆಳೆತನದ ಸುಂದರ ಬಾಂಧವ್ಯವನ್ನು ಕಟ್ಟಿಕೊಟ್ಟ ಈ ಸಿನಿಮಾ ಮತ್ತೆ ತೆರೆ ಮೇಲೆ ಮೂಡಿಬರಲು ಫ್ಯಾನ್ಸ್ ಹವಣಿಸುತ್ತಿದ್ದಾರೆ. ಇಂದಿಗೂ ಈ ಮೂವರು ಸ್ನೇಹಿತರ ಕಥೆ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದಿರುವುದು ನಟರ ಪಾಲಿಗೆ ಅದೃಷ್ಟವೇ ಸರಿ.
ಫೆ.3 ರಂದು ಕಂಗ್ರಾಜುಲೇಷನ್ಸ್ ರಿಲೀಸ್: ಖ್ಯಾತ ನಿರ್ದೇಶಕ ರೆಹಾನ್ ಚೌಧರಿಯ 'ಕಂಗ್ರಾಜುಲೇಷನ್ಸ್' ಸಿನಿಮಾ ಫೆಬ್ರವರಿ 3 ರಂದು ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಯೋಗ್ಯ ಪ್ರತಿಕ್ರಿಯೆಯನ್ನು ಚಿತ್ರ ಪಡೆದಿದೆ. ಇದು ಗುಜರಾತಿ ನಾಟಕ ಚಲನಚಿತ್ರವಾಗಿದ್ದು, ಶರ್ಮನ್ ಜೋಶಿ, ಮಾನಸಿ ಪರೇಖ್ ಗೋಹಿಲ್, ಜಯೇಶ್ ಬರ್ಬಹ್ಯಾ, ಅಮಿ ಭಯಾನಿ, ಅರ್ಚನ್ ತ್ರಿವೇದಿ, ಸ್ವಾತಿ ಡೇವ್ ಮತ್ತು ಇತರೆ ಕಲಾವಿದರು ನಟಿಸಿದ್ದಾರೆ. ಇನ್ನೂ '3 ಈಡಿಯಡ್ಸ್' ಚಿತ್ರವು 2009ರಲ್ಲಿ ಬಿಡುಗಡೆಗೊಂಡು ಭಾರೀ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾವನ್ನು ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ್ದರು.
ಇದನ್ನೂ ಓದಿ:'ಭಾವವೆಂಬ ಹೂವು ಅರಳಿ' ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಗಾಯಕಿ ವಾಣಿ ಜಯರಾಂ