ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಕರ್ನಾಟಕ ಅಲ್ಲದೇ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಕನ್ನಡದ ಹೈವೋಲ್ಟೆಜ್ ಚಿತ್ರ ಕಬ್ಜ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಿಂದ ಹಿಡಿದು ಮುಂಬೈ, ಹೈದರಾಬಾದ್, ಚೆನ್ನೈ ಸೇರಿದಂತೆ ಎಲ್ಲೆಲ್ಲೂ ಕಬ್ಜ ಚಿತ್ರದ್ದೇ ಹವಾ. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಗಳಾದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅಭಿನಯದ ಕಬ್ಜ ಸಿನಿಮಾಗೆ ಅವರ ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ.
ರೌಡಿಸಂ ಎಂಬ ಅಂಡರ್ವರ್ಲ್ಡ್ ಕಥೆಗೆ ಓಂಕಾರ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ನಿರ್ದೇಶಕ ಆರ್ ಚಂದ್ರು ಹಾಲಿವುಡ್ ಶೈಲಿಯ ಮೇಕಿಂಗ್ ಮಾಡಿ, ಅದರಲ್ಲಿ ಅಂಡರ್ ವರ್ಲ್ಡ್ ಕಥೆಯನ್ನ ಹೇಳಿದ್ದಾರೆ. ಲವ್ ಸ್ಟೋರಿ ಹಾಗೂ ಫ್ಯಾಮಿಲಿ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿದ್ದ ನಿರ್ದೇಶಕ ಆರ್ ಚಂದ್ರು ಇದೀಗ ಅಂಡರ್ ವರ್ಲ್ಡ್ ಕಥೆಯುಳ್ಳ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕಬ್ಜ ಸಿನಿಮಾ 1960 - 1980ರಲ್ಲಿ ನಡೆಯುವ ಕಥೆ. ಅಮರಾವತಿ ಎಂಬ ನಗರ ಬಲಿಷ್ಠ ಅಂಡರ್ ವರ್ಲ್ಡ್ ಅಧೀನದಲ್ಲಿರುತ್ತೆ. ಬಹದ್ದೂರ್ ಎಂಬ ರಾಜಮನೆತನದವರು ಈ ಅಮರಾವತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ತುದಿಗಾಲಲ್ಲಿ ಲೆಕ್ಕಾಚಾರ ಹಾಕ್ತಾ ಇರುತ್ತಾರೆ. ಆದರೆ ಅದು ಸಾಧ್ಯವಾಗಲ್ಲ. ಅಂಡರ್ವರ್ಲ್ಡ್ ಮುಷ್ಠಿಯಲ್ಲಿ ಈ ಅಮರಾವತಿ ಇರುತ್ತದೆ. ಈ ಅಮರಾವತಿಯಲ್ಲಿ ಬಹಳ ಬಲಿಷ್ಠನಾದ ಕಲೀಲ್ ಎಂಬ ಡಾನ್ ಪಾಳೇಗಾರನಾಗಿರುತ್ತಾನೆ. ಪೈಲಟ್ ಆಗಬೇಕು ಅಂದುಕೊಂಡಿದ್ದ ಅರ್ಕೇಶ್ವರ ಅಂದ್ರೆ ಉಪೇಂದ್ರ ಅಮರಾವತಿಗೆ ಏಕೆ ಎಂಟ್ರಿ ಕೊಡ್ತಾರೆ ಅನ್ನೋದು ಕಬ್ಜ ಸಿನಿಮಾ ಕಥೆ.
ರಿಯಲ್ ಸ್ಟಾರ್ ಉಪೇಂದ್ರ ರೆಟ್ರೋ ಲುಕ್ನಲ್ಲಿ ಥೇಟ್ ಬ್ಲ್ಯಾಕ್ ಅಂಡ್ ವೈಟ್ ಕಾಲದ ಡಾನ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ಈ ಅರ್ಕೇಶ್ವರನನ್ನು ಬಂಧಿಸುವ ಖಡಕ್ ಭಾರ್ಗವ್ ಬಕ್ಷಿಯಾಗಿ ಮಿಂಚಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಬಂದೂಕು ಹಿಡಿದು ಬರುವ ದೃಶ್ಯ ಅಭಿಮಾನಿಗಳ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಬಾಯಲ್ಲಿ ಸಿಗರೇಟ್ ಹಚ್ಚಿ ನಾನು ಬಂದಿರೋದು ಕಬ್ಜ ಮಾಡೋದಿಕ್ಕೆ ಅನ್ನೋ ಡೈಲಾಗ್ ಕಬ್ಜ 2 ಸಿನಿಮಾಗೆ ಮುನ್ನುಡಿ ಬರೆದಂತಿದೆ.