ಹೈದರಾಬಾದ್: ದಕ್ಷಿಣ ಭಾರತದಲ್ಲಿ ಅಭಿಮಾನಿಗಳು ತಮ್ಮ ತಾರೆಯರ ವಿಷಯದಲ್ಲಿ ಅತಿರೇಕದ ಅಭಿಮಾನ ತೋರುವುದು ಸಾಮಾನ್ಯ. ಇದೀಗ ತೆಲುಗು ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಇತ್ತೀಚಿನ ಸಿನಿಮಾ 'ವೀರ ಸಿಂಹ ರೆಡ್ಡಿ' ಬಿಡುಗಡೆಯಾಗಿದ್ದು, ಜಗತ್ತಿನ ನಾನಾ ಭಾಗಗಳಲ್ಲಿ ಅತ್ಯುತ್ತುಮ ಪ್ರದರ್ಶನ ಕಾಣುತ್ತಿದೆ. ಕೆಲವು ಸ್ಥಳಗಳಲ್ಲಿ ವಿಚಿತ್ರ ಘಟನಾವಳಿಗಳು ವರದಿಯಾಗಿವೆ.
ಇದೆಂಥಾ ಅಭಿಮಾನ?:ಬಾಲಯ್ಯರ ಚಿತ್ರಕ್ಕಾಗಿ ನಿಜಾಮಾಬಾದ್ ಜಿಲ್ಲೆಯ ಬೋಧನ್ ಪಟ್ಟಣದಿಂದ ಸುಮಾರು 200 ಕಾರ್‌ಗಳಲ್ಲಿ ಅಭಿಮಾನಿಗಳ ದಂಡು ಸಿನಿಮಾ ಥಿಯೇಟರ್‌ಗಳತ್ತ ಬಂದಿತ್ತು. ಬಾಲಯ್ಯ ಮೇಲಿನ ಪ್ರೀತಿಯಿಂದ ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ ಅನ್ನೋದು ಅಭಿಮಾನಿಗಳ ಮಾತು. ಆಸ್ಟ್ರೇಲಿಯಾದಲ್ಲೂ ಫ್ಯಾನ್ಸ್ ಕಾರ್‌ಗಳ ಮೂಲಕ ರ‍್ಯಾಲಿ ಕೈಗೊಂಡು ವಿಶೇಷ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಬಾಲಯ್ಯ ಹಾಡಿಗೆ ಕುಣಿದು ಕುಪ್ಪಳಿಸಿದ ಅಜ್ಜ: ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿರುವ ಈ ಚಿತ್ರ ಗುರುವಾರ ಬಿಡುಗಡೆಯಾಗಿದೆ. ಮುಂಜಾನೆ 4 ಗಂಟೆಗೆ ಪ್ರದರ್ಶನಗಳು ಆರಂಭವಾಗುತ್ತಿದ್ದಂತೆ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿತ್ತು. ಮೊದಲ ದಿನವೇ ನೆಚ್ಚಿನ ನಟನ ಮೊದಲ ದೇಖಾವೆಗಾಗಿ ಅಭಿಮಾನಿಗಳು ಪೈಪೋಟಿ ನಡೆಸಿದ್ದಾರೆ. ಬಾಲಯ್ಯರ ಡೈಲಾಗ್, ಹಾಡುಗಳಿಗೆ ಶಿಳ್ಳೆ ಹೊಡೆಯುವುದಲ್ಲದೇ ಸ್ಟೆಪ್ಸ್‌ನಲ್ಲೂ ಧೂಳೆಬ್ಬಿಸಿದರು. ಥಿಯೇಟರ್‌ವೊಂದರಲ್ಲಿ ಇಳಿವಯಸ್ಸಿನ ವ್ಯಕ್ತಿಯೊಬ್ಬರು ಬಾಲಯ್ಯ ಹಾಡಿಗೆ ಡ್ಯಾನ್ಸ್ ಮಾಡಿದರು. ಈ ವಿಡಿಯೋ ವೈರಲ್ ಆಗಿದೆ.
ಸಿನಿಮಾ ಸ್ಕ್ರೀನ್ಗೆ ಬೆಂಕಿ: ಆಂಧ್ರಪ್ರದೇಶದ ವಿಶಾಖಪಟ್ಟಣದ ಸಬ್ಬವರಂನಲ್ಲಿ ತಾಂತ್ರಿಕ ದೋಷದಿಂದ ಚಿತ್ರ ಅರ್ಧಕ್ಕೆ ನಿಂತಿದೆ. ಇದರಿಂದ ಆಕ್ರೋಶಗೊಂಡ ಕೆಲ ಅಭಿಮಾನಿಗಳು ಚಿತ್ರಮಂದಿರದ ಪರದೆಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಚಿತ್ರಮಂದಿರ ಮಾಲೀಕನಿಗೆ ಅಪಾರ ನಷ್ಟ ಉಂಟಾಗಿದೆ.