ಕರ್ನಾಟಕ

karnataka

ETV Bharat / entertainment

'ಉಗ್ರಂ' ಸಿನಿಮಾ ಕಥೆಯಂತಿದೆ 'ಸಲಾರ್' ಟ್ರೇಲರ್ ಎಂದ ಪ್ರೇಕ್ಷಕರು - prabhas

Salaar trailer: ಪ್ರೇಕ್ಷಕರು ಸಲಾರ್​ ಮತ್ತು ಉಗ್ರಂ ಸಿನಿಮಾ ಕಥೆಗಳನ್ನು ಹೋಲಿಕೆ ಮಾಡುತ್ತಿದ್ದಾರೆ.

fans assuming salaar and Ugramm is same story
'ಉಗ್ರಂ' ಸಿನಿಮಾ ಕಥೆಯಂತಿದೆ 'ಸಲಾರ್' ಟ್ರೇಲರ್ ಎಂದ ಪ್ರೇಕ್ಷಕರು

By ETV Bharat Karnataka Team

Published : Dec 2, 2023, 2:35 PM IST

ಕೆಜಿಎಫ್​​ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಹೈ ವೋಲ್ಟೇಜ್ ಚಿತ್ರ 'ಸಲಾರ್'. ಕನ್ನಡ ಪ್ರತಿಷ್ಟಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫುಲ್ಮ್ಸ್ ಅಡಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ಚಿತ್ರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕ ನಟನಾಗಿ ಅಭಿನಯಿಸಿದ್ದು, ನಿನ್ನೆ ಸಂಜೆ ಚಿತ್ರದ ಆಫೀಶಿಯಲ್ ಟ್ರೇಲರ್ ಅನಾವರಣಗೊಂಡಿದೆ. ಟ್ರೇಲರ್ ಅತಿ ಹೆಚ್ಚು ವೀಕ್ಷಣೆ ಆಗುತ್ತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಕೆಲ ದಿನಗಳಿಂದ ಸಲಾರ್ ಸಖತ್​ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರತಯಾರಕರು ಕೂಡ ವಿಭಿನ್ನ ಪ್ರಚಾರ ಕೈಗೊಂಡಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದಲೇ ಚಿತ್ರದ ಬಗ್ಗೆ, ಟ್ರೇಲರ್ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು. ಪ್ರೇಕ್ಷಕರ ಊಹೆಗೂ ಮೀರಿದ ಆ್ಯಕ್ಷನ್‍ ದೃಶ್ಯಗಳು ಟ್ರೇಲರ್​​ನಲ್ಲಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಸಿನಿಮಾ ಸಖತ್​ ಸದ್ದು ಮಾಡುತ್ತಿದೆ. ಸಲಾರ್ ಜಗತ್ತನ್ನು ಮತ್ತು ಅಲ್ಲಿನ ಪಾತ್ರಧಾರಿಗಳನ್ನು ಪರಿಚಯಿಸುವುದರ ಜೊತೆಗೆ ಚಿತ್ರದ ಮೇಲೆ ನಿರೀಕ್ಷೆಗಳನ್ನು ಹೆಚ್ಚುವಂತೆ ಮಾಡಿದೆ 'ಟ್ರೇಲರ್​'.

ಆ್ಯಕ್ಷನ್‍, ಮಾಸ್ ಹೀರೋ ಆಗಿ ಗುರುತಿಸಿಕೊಂಡಿರುವ ಪ್ರಭಾಸ್‍ ಈ ಚಿತ್ರದಲ್ಲಿ ಇನ್ನಷ್ಟು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರ ಸಖತ್‍ ಮಾಸ್‍ ಆಗಿ ಮೂಡಿ ಬಂದಿರುವಂತೆ ತೋರಿದೆ. ಭಾರತೀಯ ಚಿತ್ರರಂಗದ ಖ್ಯಾತ ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್‍ ನೀಲ್‍ ಮತ್ತು ಪ್ರಭಾಸ್‍ ಕೈಜೋಡಿಸಿ ಮಾಡಿರೋ ಸಿನಿಮಾವಾದ ಹಿನ್ನೆಲೆ ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ. ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ, ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಸೇರಿದಂತೆ ಮುಂತಾದವರು ನಟಿಸಿದ್ದಾರೆ‌.

ಆದರೆ ಸದ್ಯ ರಿವೀಲ್ ಆಗಿರುವ ಸಲಾರ್ ಚಿತ್ರದ ಟ್ರೇಲರ್ ನೋಡ್ತಿದ್ರೆ ನಟ ಶ್ರೀಮುರಳಿಗೆ ಅಭಿನಯದ ಉಗ್ರಂ ಸಿನಿಮಾ ನೆನಪಾಗುತ್ತದೆ. ಉಗ್ರಂ ಚಿತ್ರದಲ್ಲಿ ಗೆಳೆಯನಿಗೋಸ್ಕರ ಏನು ಬೇಕಾದ್ರೂ ಮಾಡುವ ಗೆಳೆಯನ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದರು. ಮುರಳಿ ಗೆಳೆಯನಾಗಿ ನಟ ತಿಲಕ್‌ ಅಬ್ಬರಿಸಿದ್ದರು. ಅದೇ ರೀತಿ ಸಲಾರ್ ಚಿತ್ರದ ಟ್ರೇಲರ್​ನಲ್ಲಿ, ಪೃಥ್ವಿರಾಜ್ ಸುಕುಮಾರನ್ ಗೆಳೆಯನಾಗಿ‌ ಡಾರ್ಲಿಂಗ್ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್​ ವೀಕ್ಷಿಸಿದವರ ಪೈಕಿ ಹಲವರು ಇದು ಉಗ್ರಂ‌ ಸಿನಿಮಾದ ಕಥೆಯಂತೆ ತೋರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:'ಸಲಾರ್​' ಪ್ರಶಾಂತ್​ ನೀಲ್​ ನಿರ್ದೇಶನದ 'ಉಗ್ರಂ' ರಿಮೇಕ್​; ರವಿ ಬಸ್ರೂರು ವಿಡಿಯೋ ವೈರಲ್​

ಇನ್ನು ಕನ್ನಡದ ಪ್ರಾದೇಶಿಕ ಅಭಿರುಚಿಗೆ ತಕ್ಕಂತೆ ಉಗ್ರಂ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು.‌ ಆದರೆ ಸಲಾರ್ ಸಿನಿಮಾ‌ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣಗೊಂಡಿದೆ. ಅದ್ಧೂರಿ ಮೇಕಿಂಗ್, ಬಿಗ್ ಸ್ಟಾರ್ ಕಾಸ್ಟ್, ಭರ್ಜರಿ ಆ್ಯಕ್ಷನ್​ ಸೀನ್​​​​ಗಳನ್ನು ಸಲಾರ್ ಚಿತ್ರದಲ್ಲಿ ನೋಡಬಹುದಾಗಿದೆ. ಪ್ರಶಾಂತ್ ನೀಲ್ ಉಗ್ರಂ ಸಿನಿಮಾದ ಕಥೆಯನ್ನು ಮತ್ತೆ ಅದ್ಧೂರಿ ಮೇಕಿಂಗ್​ನಲ್ಲಿ ಹೇಳಲು ಹೊರಟ್ಟಿದ್ದಾರಾ ಎಂಬ‌ ಪ್ರಶ್ನೆ ಮೂಡಿದೆ. ಎಲ್ಲದಕ್ಕೂ ಸಿನಿಮಾ ತೆರೆಕಂಡ ಬಳಿಕ ಉತ್ತರ ಸಿಗಲಿದೆ. ಹೊಂಬಾಳೆ ಫಿಲ್ಮ್ಸ್​​​ನಡಿ ಈ ಚಿತ್ರವನ್ನು ವಿಜಯ್‍ ಕಿರಗಂದೂರು ನಿರ್ಮಿಸಿದ್ದಾರೆ. ಡಿ.22ರಂದು 'ಸಲಾರ್: ಪಾರ್ಟ್ 1' ವಿಶ್ವದಾದ್ಯಂತ ಏಕಕಾಲಕ್ಕೆ ಪಂಚಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:'ಸಲಾರ್'​ ಟ್ರೇಲರ್​: ಮತ್ತೊಂದು ಹಿಟ್​ಗೆ ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್​ ನೀಲ್​​ ರೆಡಿ

ABOUT THE AUTHOR

...view details