ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರ ಹೊಮ್ಮಿರುವ ಸಂಸ್ಥೆ ಹೊಂಬಾಳೆ ಫಿಲ್ಮ್. ಆದರೀಗ ಈ ಸಂಸ್ಥೆ ಬಗ್ಗೆ ಕನ್ನಡ ಪ್ರೇಕ್ಷಕರ ಜೊತೆ ದೊಡ್ಮನೆಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಡಿಸೆಂಬರ್ 22ರಂದು ಸಲಾರ್ ರಿಲೀಸ್: ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಕ್ಯಭೂಮಿಕೆಯ ಸಲಾರ್ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲ ಟೆಕ್ನಿಕಲ್ ಸಮಸ್ಯೆಯಿಂದ ಸಲಾರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಪೋಸ್ಟ್ ಪೋನ್ ಮಾಡಲಾಯಿತು. ಕೊನೆಗೂ, ಶುಕ್ರವಾರದಂದು ಸಲಾರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಯಿತು. ಡಿಸೆಂಬರ್ 22ರಂದು ಸಲಾರ್ ಸಿನಿಮಾ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿರುವುದು ಖುಷಿಯ ವಿಷಯವೇ. ಆದರೆ, ಇದರಿಂದ ಡೊಡ್ಮನೆ ಕುಡಿ ಯುವ ರಾಜ್ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ' ರಿಲೀಸ್ ಡೇಟ್ ಮುಂದಕ್ಕೆ ಹೋಗಲಿದೆಯಾ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಯುವ ಬಿಡುಗಡೆ ದಿನಾಂಕ ಮುಂದೂಡಿಕೆ? ಎಲ್ಲರಿಗೂ ಗೊತ್ತಿರುವಂತೆ ಯುವ ರಾಜ್ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ'ವನ್ನು ನಿರ್ಮಿಸುತ್ತಿರುವುದು ಮತ್ತು ಯುವ ರಾಜ್ಕುಮಾರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಇದೇ ಖ್ಯಾತ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಯುವ ಚಿತ್ರದ ಮುಹೂರ್ತದ ದಿನವೇ, ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿತ್ತು. ಡಿಸೆಂಬರ್ 22ರಂದು ಬಿಡುಗಡೆ ಮಾಡುವುದಾಗಿ ಸಂಸ್ಥೆ ತಿಳಿಸಿತ್ತು. ಇದು ದೊಡ್ಡ ಸುದ್ದಿಯಾಗಿತ್ತು. ಇದೀಗ ಹೊಂಬಾಳೆ ಸಂಸ್ಥೆಯ ಸಲಾರ್ ಸಿನಿಮಾ ಬಿಡುಗಡೆಯನ್ನು ಅದೇ ದಿನದಂದು ನಿಗದಿಪಡಿಸಲಾಗಿದೆ. ಹಾಗಾಗಿ, ಈ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿದೆಯೇ? ಅಥವಾ ಯುವ ಬಿಡುಗಡೆ ದಿನಾಂಕ ಮುಂದೋಗಲಿದೆಯೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಯುವ ಸಿನಿಮಾ ಶೂಟಿಂಗ್ ವಿಳಂಬ?!ಹೊಂಬಾಳೆ ಫಿಲ್ಮ್ಸ್ನ ಆಪ್ತರು ಹೇಳುವ ಪ್ರಕಾರ, ಯುವ ಸಿನಿಮಾದ ಶೂಟಿಂಗ್ ಡಿಸೆಂಬರ್ ಹೊತ್ತಿಗೆ ಮುಗಿಯೋದು ಕಷ್ಟ. ಹೀಗಾಗಿ, ಯುವ ಚಿತ್ರ ಬಿಡುಗಡೆ ಆಗಬೇಕಿದ್ದ ದಿನಾಂಕಕ್ಕೆ ಸಲಾರ್ ಸಿನಿಮಾವನ್ನು ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ಮಾಲೀಕ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.