ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹುಟ್ಟಿಸಿರೋ ಸಿನಿಮಾ 'ಟಗರು ಪಲ್ಯ'. ಅಷ್ಟೇ ಅಲ್ಲ, ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ಅಡಿ ನಿರ್ಮಿಸುತ್ತಿರುವ ಚಿತ್ರವಿದು. ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ ಹಾಗೂ ಉಮೇಶ್ ಕೆ ಕೃಪ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ 7 ಸ್ಟಾರ್ ಸುಲ್ತಾನ ಎಂಬ ಟಗರು ಕೂಡ ಕಾಣಿಸಿಕೊಳ್ಳಲಿದೆ.
ಅನೇಕ ಟಗರು ಕಾಳಗಗಳಲ್ಲಿ ಗೆದ್ದು ಬೀಗಿರುವ 7 ಸ್ಟಾರ್ ಸುಲ್ತಾನ ಹೆಸರಿನ ಟಗರನ್ನು ಬಕ್ರೀದ್ ಹಬ್ಬಕ್ಕೆ ಕುರುಬಾನಿ ಕೊಡಲು ಮಾಲೀಕರು ತೀರ್ಮಾನ ಮಾಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು. ಈ ಬಗ್ಗೆ ಟಗರು ಪಲ್ಯ ಚಿತ್ರತಂಡ ಕೂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದೆ. 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡದಿರಲು ಮಾಲೀಕರು ತೀರ್ಮಾನ ಮಾಡಿದ್ದಾರೆ.
ಟಗರು ಪಲ್ಯ ಸಿನಿಮಾದಲ್ಲಿ 7 ಸ್ಟಾರ್ ಸುಲ್ತಾನ: ಈ ಚಿತ್ರದಲ್ಲಿ ಟಗರು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ. ನಿರ್ದೇಶಕ ಉಮೇಶ್ ಕೆ ಕೃಪ ಹೇಳುವ ಹಾಗೆ, ಮೊದಲು ಈ ಚಿತ್ರದ ಶೂಟಿಂಗ್ಗೆ ಟಗರು ಬೇಕೆಂದು ಇಡೀ ರಾಜ್ಯದಲ್ಲಿ 50ಕ್ಕೂ ಹೆಚ್ಚು ಟಗರುಗಳನ್ನು ಹುಡುಕಿದೆವು. ಆದರೆ ಕೆಲ ಟಗರುಗಳು ನೋಡ ನೋಡುತ್ತಿದ್ದಂತೆ ಗುದ್ದುತ್ತಿದ್ದವು, ಎಂಬ ಕಾರಣಕ್ಕೆ ಆ ಟಗರುಗಳನ್ನು ರಿಜೆಕ್ಟ್ ಮಾಡಲಾಯ್ತು. ಕೊನೆಗೆ ನಮಗೆ ಸಿಕ್ಕಿದ್ದೇ ಈ 7 ಸ್ಟಾರ್ ಟಗರು. ಈ ಟಗರು ನೋಡಲು ದೈತ್ಯಕಾರವಾಗಿ ಇದ್ರೂ, ಬಹಳ ಫ್ರೆಂಡ್ಲಿ ಟಗರು. ನಮ್ಮ ಶೂಟಿಂಗ್ನಲ್ಲಿ ಭಾಗಿಯಾಗಿದೆ. ಹೇಳಿಕೊಟ್ಟಂತೆ ನಾಗಭೂಷಣ್ ಹಾಗೂ ರಂಗಾಯಣ ರಘು ಅವರ ಜೊತೆ ನಟಿಸಿದೆ. ಇಂತಂಹ ಪ್ರೀತಿ ಇರುವ ಹಾಗು ಸಾಕಷ್ಟು ಬಹುಮಾನ ಗೆದ್ದಿರುವ ಈ 7 ಸ್ಟಾರ್ ಟಗರು ಈ ಬಕ್ರೀದ್ ಹಬ್ಬಕ್ಕೆ ಕುರುಬಾನಿ ಮಾಡುತ್ತಾರೆ ಅಂತಾ ತಿಳಿದ ತಕ್ಷಣ, ನಾನು ಮತ್ತು ನಮ್ಮ ನಿರ್ಮಾಪಕ ಧನಂಜಯ್ ಅವರು ಹೋಗಿ ಟಗರು ಮಾಲೀಕ ಯುನೀಸ್ ಅವರ ಮನಸ್ಸು ಬದಲಾಯಿಸಲು ಪ್ರಯತ್ನಿಸಿದೆವು. ಆ ಟಗರನ್ನು ನಾವೇ ಇಟ್ಟುಕೊಂಡು ಸಾಕುತ್ತೇವೆ. ಅದನ್ನು ನಮಗೆ ಕೊಡಿ. ಕಡಿಯೋದು ಬೇಡ ಅಂತಾ ಮನವಿ ಮಾಡಿಕೊಂಡ ಮೇಲೆ ಮಾಲೀಕರು ಮನಸ್ಸು ಬದಲಾಯಿಸಿದರು. ಈ 7 ಸ್ಟಾರ್ ಟಗರು ಇರುವರೆಗೂ ನಾನು ಸಾಕುತ್ತೇನೆ. ಇದನ್ನು ಕುರುಬಾನಿ ಮಾಡಲು ಬಿಡಲ್ಲ ಎಂಬ ದಿಟ್ಟ ನಿರ್ಧಾರ ಮಾಡಿದರು ಅಂತಾ ಟಗರು ಪಲ್ಯ ಚಿತ್ರದ ನಿರ್ದೇಶಕ ಉಮೇಶ್ ಕೆ ಕೃಪ ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡರು.