ತಮಿಳು ನಟ ರಜನಿಕಾಂತ್ ಅವರು ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇಲ್ಲೊಬ್ಬ ಕಟ್ಟಾ ಅಭಿಮಾನಿ ರಜನಿಗಾಗಿ ದೇವಾಲಯವನ್ನೇ ಕಟ್ಟಿಸಿದ್ದಾರೆ. ಈ ಬಾರಿ ಪೊಂಗಲ್ ಹಬ್ಬವನ್ನು ಇದೇ ದೇವಾಲಯದಲ್ಲಿ ಎಲ್ಲರೊಂದಿಗೆ ಆಚರಿಸಿ ಸಂಭ್ರಮಿಸಿ ಗಮನ ಸೆಳೆದರು.
ಈ ಅಭಿಮಾನಿಯ ಹೆಸರು ಕಾರ್ತಿಕ್. ಮಧುರೈ ಜಿಲ್ಲೆಯ ತಿರುಮಂಗಲಂ ನಿವಾಸಿ. ನಿವೃತ್ತ ಸೇನಾ ಸಿಬ್ಬಂದಿಯೂ ಹೌದು. ಇದೀಗ ಖಾಸಗಿ ಮ್ಯಾಟ್ರಿಮೋನಿ ಕೇಂದ್ರದ ಮಾಲೀಕರು. ರಜನಿ ಅವರನ್ನು ಭೇಟಿ ಮಾಡಬೇಕೆಂಬುದು ಇವರ ಜೀವನದ ಮಹತ್ತರ ಬಯಕೆಯಂತೆ. ಇದೇ ಅಭಿಮಾನ, ಪ್ರೀತಿಯಲ್ಲಿ ಕಳೆದ ವರ್ಷ ತಿರುಮಂಗಲಂ ಸಮೀಪದ ಕುಲೈಯಪುರಂನಲ್ಲಿ ರಜನಿ ಅವರ 250 ಕೆ.ಜಿ ತೂಕದ ಮೂರ್ತಿ ಪ್ರತಿಷ್ಠಾಪಿಸಿದ್ದರು.
"ನಾನು ರಜನಿಕಾಂತ್ ಬಿಟ್ಟು ಬೇರಾವುದೇ ನಟರ ಸಿನಿಮಾ ನೋಡುವುದಿಲ್ಲ. ನನಗೆ ಅವರು ದೇವರು. ಹಾಗಾಗಿ ಅವರಿಗಾಗಿ ದೇವಸ್ಥಾನ ನಿರ್ಮಿಸಿದ್ದೇನೆ. ರಜನಿ ಅವರನ್ನು ತುಂಬಾ ಪ್ರೀತಿಸುತ್ತೇನೆ. ನಮ್ಮ ಕುಟುಂಬದ ಐದು ತಲೆಮಾರುಗಳಿಂದಲೂ ನಾವು ಅವರ ಅಭಿಮಾನಿಗಳು" ಎಂದು ಕಾರ್ತಿಕ್ ಹೇಳಿದ್ದಾರೆ. ಈ ಮೂರ್ತಿಗೆ ನಟನ ಹುಟ್ಟುಹಬ್ಬದಂದು ವಿಶೇಷ ಪೂಜೆ ಸಲ್ಲಿಸಿ ಅಭಿಷೇಕವನ್ನೂ ಅವರು ಮಾಡುತ್ತಿದ್ದಾರೆ.
ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ನಟನ ಮೂರ್ತಿ ಮುಂದೆ ಬಾಳೆ ಎಲೆಯಲ್ಲಿ ಅಕ್ಕಿ, ತರಕಾರಿ, ತೆಂಗಿನ ಕಾಯಿ, ಹಣ್ಣು ಎಲ್ಲವನ್ನೂ ಇಟ್ಟು ಪೂಜಿಸಿದ್ದಾರೆ. "ಪ್ರತಿ ವರ್ಷ ಸಾಮಾನ್ಯವಾಗಿ ನಾವು ಪೊಂಗಲ್ ಹಬ್ಬವನ್ನು ಮನೆಯಲ್ಲೇ ಆಚರಿಸುತ್ತೇವೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ರಜನಿ ಮೂರ್ತಿ ಸ್ಥಾಪಿಸಿ ಪೂಜಿಸಿದೆವು. ಈ ಬಾರಿ ಅವರ ಮೂರ್ತಿಯೆದುರು ಪೊಂಗಲ್ ಆಚರಿಸಿದ್ದೇವೆ. ಎಲ್ಲರಿಗೂ ಪೊಂಗಲ್ ಶುಭಾಶಯಗಳು. ರಜನಿಕಾಂತ್ ನನ್ನನ್ನು ಗುರುತಿಸುವವರೆಗೂ, ನನಗೆ ಅವರ ಕರೆ ಬರುವವರೆಗೂ ಈ ಆಚರಣೆಯನ್ನು ನಾವು ಮಾಡುತ್ತೇವೆ" ಎಂದು ಕಾರ್ತಿಕ್ ಹೇಳಿದರು.
ಇದನ್ನೂ ಓದಿ:ವಿಜಯಪುರ ಸಿದ್ದೇಶ್ವರ ಜಾತ್ರೆ: ಭೋಗಿ, ಶ್ರೀ ಸಿದ್ದರಾಮನ ಯೋಗದಂಡಕ್ಕೆ ಅಕ್ಷತಾರ್ಪಣೆ