ಬಹುನಿರೀಕ್ಷಿತ 'ಲೈಗರ್' ಚಿತ್ರದ ಸೋಲಿನ ಬಳಿಕ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದಿಂದ ತಮಗೆ ಆರ್ಥಿಕ ನಷ್ಟ ಉಂಟಾಗಿದೆ. ಹಾಗಾಗಿ ಹಣ ವಾಪಸ್ ನೀಡುವಂತೆ ಹಲವು ವಿತರಕರು ಬೆದರಿಕೆ ಹಾಕುತ್ತಿದ್ದಾರೆ. ಕಂಗೆಟ್ಟ ಪೂರಿ ಜಗನ್ನಾಥ್ ಬುಧವಾರ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.
ಹಣದ ವಿಚಾರವಾಗಿ ನನ್ನ ಮತ್ತು ನನ್ನ ಕುಟುಂಬಕ್ಕೆ ಹಲವರು ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ತನ್ನ ಕುಟುಂಬವನ್ನು ರಕ್ಷಿಸುವಂತೆ ಅವರು ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಇಲ್ಲಿಯ ಪೊಲೀಸರು ಗುರುವಾರ ಅವರ ನಿವಾಸಕ್ಕೆ ಭದ್ರತೆ ಒದಗಿಸಿದ್ದಾರೆ.
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮುಖ್ಯಭೂಮಿಕೆಯ 'ಲೈಗರ್' ಪುರಿ ಜಗನ್ನಾಥ್ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು ಆಗಸ್ಟ್ 25 ರಂದು ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸೋಲು ಕಂಡಿದ್ದು ಇದರಿಂದ ವಿತರಕರಿಗೆ ಸಾಕಷ್ಟು ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.