ತಂತ್ರಜ್ಞಾನ ಬಹಳ ಮುಂದುವರೆದಿದೆ. ಆದರೆ, ಇದರ ದುರ್ಬಳಕೆ ಹೆಚ್ಚಾಗುತ್ತಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಬಳಕೆ ಮಾಡಿಕೊಂಡು ಯಾರ ಮುಖವನ್ನು ಯಾರ ದೇಹಕ್ಕೆ ಬೇಕಾದರೂ ಜೋಡಿಸಬಹುದು. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ನಟಿ ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರು ಈ ವಿಡಿಯೋದಲ್ಲಿ ಕಾಣಿಸುತ್ತಿರುವುದು ರಶ್ಮಿಕಾರೆಂದೇ ತಪ್ಪಾಗಿ ಭಾವಿಸಿದ್ದಾರೆ. ಆದರೆ, ಪತ್ರಕರ್ತರೊಬ್ಬರು ಮೂಲ ವಿಡಿಯೋವನ್ನು ಪತ್ತೆ ಮಾಡಿ, ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಫಿಟ್ ಡ್ರೆಸ್ ಹಾಕಿ ಲಿಫ್ಟ್ ಏರುತ್ತಿರುವ ದೃಶ್ಯವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವಿದೆ. ಆದರೆ ಈ ವಿಡಿಯೋ ಅಸಲಿಗೆ ಇದು ಮತ್ತೊಬ್ಬ ಯುವತಿಯದ್ದು. ಅಕ್ಟೋಬರ್ 8ರಂದು ಆ ಯುವತಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವಿಡಿಯೋ ಹಂಚಿಕೊಂಡಿದ್ದರು. ಅದೇ ವಿಡಿಯೋಗೆ ಎಐ ತಂತ್ರಜ್ಞಾನ ಬಳಸಿ ಯಾರೋ ಕಿಡಿಗೇಡಿಗಳು ಆಕೆಯ ಮುಖಕ್ಕೆ ರಶ್ಮಿಕಾ ಮುಖವನ್ನು ಜೋಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಜನರು, ಇದು ನಟಿ ರಶ್ಮಿಕಾ ಮಂದಣ್ಣ ಅವರದ್ದೇ ಎಂದು ತಪ್ಪಾಗಿ ಭಾವಿಸಿದ್ದಾರೆ.
ಇದೀಗ ಭಾರತೀಯ ಪತ್ರಕರ್ತ ಅಭಿಷೇಕ್ ಕುಮಾರ್ ಎಂಬವರು ವಿಡಿಯೋದ ಫ್ಯಾಕ್ಟ್ ಚೆಕ್ ಮಾಡಿದ್ದಾರೆ. ಮೂಲ ವಿಡಿಯೋವನ್ನು ಪತ್ತೆ ಹಚ್ಚಿ ಎಡಿಟೆಡ್ ಹಾಗೂ ಒರಿಜಿನಲ್ ಎರಡೂ ವಿಡಿಯೋಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾರದ್ದೇ ಎನ್ನಲಾದ ವೈರಲ್ ವಿಡಿಯೋ ನಿಜವಾಗಿಯೂ ಅವರದ್ದಲ್ಲ. ಬೇರೊಬ್ಬ ಯುವತಿಯ ವಿಡಿಯೋ ಇದು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇಂತಹ ವಿಡಿಯೋ ವೈರಲ್ ಆಗುತ್ತಿರುವ ಹಿಂದಿನ ಜಾಡು ಪತ್ತೆ ಹಚ್ಚಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.