2023ರ ಪ್ರತಿಷ್ಠಿತ ಅಂತಾರಾಷ್ಟ್ರೀಯ 'ಎಮ್ಮಿ ಪ್ರಶಸ್ತಿ' ಪ್ರದಾನ ಸಮಾರಂಭ ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿದೆ. ವಿವಿಧ ವಿಭಾಗಗಳಲ್ಲಿ ಪ್ರತಿಭಾನ್ವಿತ ಕಲಾವಿದರು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತದಿಂದ ಜಿಮ್ ಸರ್ಭ್, ವೀರ್ ದಾಸ್ ಮತ್ತು ಶೆಫಾಲಿ ಶಾ ನಾಮಿನೇಟ್ ಆಗಿದ್ದರು. 14 ವಿವಿಧ ವಿಭಾಗಗಳಲ್ಲಿ 56 ನಾಮನಿರ್ದೇಶಿತರು 20 ವಿವಿಧ ದೇಶಗಳನ್ನು ಪ್ರತಿನಿಧಿಸಿದ್ದಾರೆ. 51ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭ ಸೋಮವಾರ (ಭಾರತದಲ್ಲಿಂದು) ನ್ಯೂಯಾರ್ಕ್ನಲ್ಲಿ ಪ್ರಾರಂಭವಾಗಿದ್ದು, ಭಾರತೀಯ ಕಲಾವಿದರು ಈಗಾಗಲೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
2023ರ ಇಂಟರ್ ನ್ಯಾಷನಲ್ ಎಮ್ಮಿ ಅವಾರ್ಡ್ಸ್ ಗೆದ್ದುಕೊಳ್ಳುವ ಮೂಲಕ ಕಾಮಿಡಿಯನ್ ವೀರ್ ದಾಸ್ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಜನಪ್ರಿಯ ಶೋ ''ವೀರ್ ದಾಸ್: ಲ್ಯಾಂಡಿಂಗ್''ಗಾಗಿ ಎಮ್ಮಿ ಕಾಮಿಡಿ ವಿಭಾಗದಲ್ಲಿ ವಿಜೇತರಾಗಿದ್ದಾರೆ. ಈ ಮೂಲಕ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಕಾಮಿಡಿ ವಿಭಾಗದಲ್ಲಿ ಎರಡು ದೇಶಗಳು ಪ್ರಶಸ್ತಿ ಪಡೆದಿವೆ. ವೀರ್ ದಾಸ್ ಅವರ ಕಾರ್ಯಕ್ರಮವಲ್ಲದೇ, ಹ್ಯಾಟ್ ಟ್ರಿಕ್ ಪ್ರೊಡಕ್ಷನ್ಸ್ ನಿರ್ಮಾಣದ ''ಡೆರ್ರಿ ಗರ್ಲ್ಸ್ - ಸೀಸನ್ 3' ಕೂಡ ಹಾಸ್ಯ ವಿಭಾಗದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಂಡಿದೆ. ಇಂಟರ್ ನ್ಯಾಷನಲ್ ಎಮ್ಮಿ ಅವಾರ್ಡ್ಸ್ ಈ 'ಟೈ ವಿಚಾರ'ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಹಾಸ್ಯ ನಟ ವೀರ್ ದಾಸ್ ಅವರ ವೃತ್ತಿಜೀವನದಲ್ಲಿ ಇದೊಂದು ಮಹತ್ತರ ಘಟ್ಟ. 'ವಿರ್ ದಾಸ್: ಲ್ಯಾಂಡಿಂಗ್' ಪ್ರೋಗ್ರಾಮ್ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡಿದೆ. ಫ್ರಾನ್ಸ್‌ನ ಲೆ ಫ್ಲಾಂಬ್ಯೂ, ಅರ್ಜೆಂಟೀನಾದ ಎಲ್ ಎನ್‌ಕಾರ್ಗಾಡೊ ಮತ್ತು ಯುಕೆಯ ಡೆರ್ರಿ ಗರ್ಲ್ಸ್ ಸೀಸನ್ 3 ರೊಂದಿಗೆ ಸ್ಪರ್ಧೆ ನಡೆಸಿ ಅಂತಿಮವಾಗಿ ಪ್ರಶಸ್ತಿ ಗೆದ್ದುಕೊಂಡಿದೆ. ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭಕ್ಕಾಗಿ, ವೀರ್ ದಾಸ್ ಅವರು ಬ್ಲ್ಯಾಕ್ ಟ್ರೆಡಿಶನಲ್ ಬಂಧಗಾಲಾ ಡ್ರೆಸ್ ಧರಿಸಿದ್ದರು.
ಇನ್ನೂ ನಿರ್ದೇಶಕಿ ಏಕ್ತಾ ಕಪೂರ್ ಅವರು 51ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಲ್ಲಿ ಡೈರೆಕ್ಟರೇಟ್ ಅವಾರ್ಡ್ (Directorate Award) ಗೆದ್ದುಕೊಂಡಿದ್ದಾರೆ. ಪ್ರಶಸ್ತಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ಭಾರತ ನಾನು ನಿಮ್ಮ ಎಮ್ಮಿ ಅನ್ನು ಮನೆಗೆ ತರುತ್ತಿದ್ದೇನೆ" ಎಂಬ ಶೀರ್ಷಿಕೆಯೊಂದಿಗೆ ತಮ್ಮ ಸಂತಸ, ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಏಕ್ತಾ ಕಪೂರ್ ಅವರು ಇಂಟರ್ನ್ಯಾಶನಲ್ ಎಮ್ಮಿ ಡೈರೆಕ್ಟರೇಟ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳಾ ನಿರ್ದೇಶಕಿ. ಇದು ಚಲನಚಿತ್ರ ಉದ್ಯಮಕ್ಕೆ ಅವರ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ.