ಕನ್ನಡ ಚಿತ್ರರಂಗದಲ್ಲಿ ಲವರ್ ಬಾಯ್ ಎಂದೇ ಕರೆಯಲ್ಪಡುವ, ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಪ್ರಜ್ವಲ್ ದೇವರಾಜ್. ಜಂಟಲ್ ಮ್ಯಾನ್, ಇನ್ಸ್ ಫೆಕ್ಟರ್ ವಿಕ್ರಂ ಸಿನಿಮಾಗಳ ಯಶಸ್ಸಿನ ಬಳಿಕ, ಪ್ರಜ್ವಲ್ ಮೂರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಅಬ್ಬರ. ಶೀರ್ಷಿಕೆಯಿಂದಲೇ ಸ್ಯಾಂಡಲ್ ವುಡ್ ನಲ್ಲಿ ಕ್ರೇಜ್ ಹುಟ್ಟಿಸಿರೋ, ಅಬ್ಬರ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿ, ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.
ಈ ಅಬ್ಬರ ಸಿನಿಮಾದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕ ಬಸವರಾಜ್ ಮಂಚಯ್ಯ, ನಿರ್ದೇಶಕ ರಾಮ್ ನಾರಾಯಣ್, ನಟ ಪ್ರಜ್ವಲ್ ದೇವರಾಜ್, ನಾಯಕಿಯರಾದ ಲೇಖಾಚಂದ್ರ, ನಿಮಿಕಾ ರತ್ನಾಕರ್ ಉಪಸ್ಥಿತರಿದ್ದರು.
ಡೈಲಾಗ್ ಇಲ್ಲದೇ ಆಕ್ಷನ್ ನಿಂದಲೇ ಸೌಂಡ್ ಮಾಡುತ್ತಿರುವ ಪ್ರಜ್ವಲ್ ದೇವರಾಜ್ ''ಅಬ್ಬರ'' ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ ಬಳಿಕ ಮಾತನಾಡಿದ ನಿರ್ಮಾಪಕ ಬಸವರಾಜ್ ಮಂಚಯ್ಯ, ಈ ಸಿನಿಮಾವನ್ನು ಪ್ರಚಾರ ಮಾಡಲು ಆಗಸ್ಟ್ 1ರಿಂದ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಧಾರವಾಡ,ಹೊಸಪೇಟೆ, ರಾಯಚೂರು, ದಾವಣಗೆರೆ, ಶಿವಮೊಗ್ಗ, ಮಂಡ್ಯ, ಹೀಗೆ ರಾಜ್ಯಾದ್ಯಂತ ಬೈಕ್ ರ್ಯಾಲಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಈ ಹಿಂದೆ ಟೈಸನ್ ಮತ್ತು ಕ್ರ್ಯಾಕ್ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಮಡಿರುವ ನಿರ್ದೇಶಕ ರಾಮ್ ನಾರಾಯಣ್ ಅಬ್ಬರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಈ ಸಿನಿಮಾದಲ್ಲಿ ಎಲ್ಲ ರೀತಿಯ ಅಬ್ಬರ ಇದ್ದು, ಇದು ಟೀಸರ್ ನಿಂದ ಗೊತ್ತಾಗಿದೆ ಎಂದು ಹೇಳಿದರು.
ಬಳಿಕ ಸಿನೆಮಾದ ನಾಯಕ ಪ್ರಜ್ವಲ್ ದೇವರಾಜ್ ಮಾತನಾಡಿ, ಇದು ನನ್ನ 29ನೇ ಸಿನಿಮಾ. ಅಬ್ಬರ ಸಿನೆಮಾವು ಆಕ್ಷನ್, ಫ್ಯಾಮಿಲಿ ಎಂಟರ್‌ಟೈನರ್ ಕಥಾ ಹಂದರ ಹೊಂದಿರೋ ಚಿತ್ರ. ಚಿತ್ರೀಕರಣ ಸಂದರ್ಭ ಒಂದೇ ದಿನ ಮೂರು ಪಾತ್ರದಲ್ಲಿ ಅಭಿನಯಿವುದು ನನಗೆ ಸಾವಾಲಾಗಿತ್ತು ಎಂದು ಹೇಳಿದರು. ಅಬ್ಬರ ಸಿನೆಮಾದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್, ಲೇಖಾಚಂದ್ರ ಅಭಿನಯಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ, ನಟಿಯರಾದ ಲೇಖಾಚಂದ್ರ ಹಾಗೂ ನಿಮಿಕಾ ರತ್ನಾಕರ್ ಮಾತನಾಡಿ, ಈ ಸಿನಿಮಾದ ಟೀಸರ್ ಹಾಗು ಹಾಡುಗಳನ್ನು ನೋಡಿ ತುಂಬಾ ಖುಷಿಯಾಯಿತು. ಪ್ರಜ್ವಲ್ ದೇವರಾಜ್ ಜೊತೆಗೆ ನಾವು ಮೂರು ಜನ ಹೀರೋಯಿನ್ ಬೇರೆ, ಬೇರೆ ಪಾತ್ರಗಳಲ್ಲಿ ನಟಿಸಿದ್ದೇವೆ ಎಂದು ಹೇಳಿದರು.
ಇನ್ನು ಸಿನೆಮಾದಲ್ಲಿ ಖಳನಾಯಕನಾಗಿ ರವಿಶಂಕರ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್ ಗೂ ಎರಡು ಪಾತ್ರದಲ್ಲಿ ನಟಿಸಿರುವುದು ವಿಶೇಷ.ಇದರ ಜೊತೆಗೆ ಶೋಭರಾಜ್, ಕೋಟೆ ಪ್ರಭಾಕರ್, ಶಂಕರ್ ಅಶ್ವಥ್, ವಿಕ್ಟರಿ ವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್, ಸಲ್ಮಾನ್, ಮಮತಾ ರಾಹುತ್, ಖುಷಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಅದ್ಭುತವಾದ ಸಂಗೀತ ನೀಡಿದ್ದಾರೆ. ಜೆ.ಕೆ.ಗಣೇಶ್ ಅವರ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಅವರ ಸಂಕಲನ, ವಿನೋದ್, ಪಳನಿರಾಜ್,ಮಾಸ್ ಮಾದ ಅವರ ಸಾಹಸ, ರಾಮು, ಮೋಹನ್, ಕಲೈ, ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಬಸವರಾಜ್ ಮಂಚಯ್ಯ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಓದಿ :ಅಂದು ಅಪ್ಪನ 'ಐ ಆ್ಯಮ್ ಯುವರ್ ಡ್ಯಾಡ್' ಡೈಲಾಗ್ ವೈರಲ್.. ಈಗ ಮಗನ 'ಡ್ಯಾಡ್ ಇಸ್ ಬ್ಯಾಡ್ ಬಾಯ್' ಫೇಮಸ್