ಕಳೆದ ಮೂರು ದಶಕಗಳಲ್ಲಿ ಕನ್ನಡ, ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಬೆಳ್ಳಿ ತೆರೆ ಮೇಲೆ ನಟ, ಖಳ ನಟ, ಪೊಲೀಸ್ ಪಾತ್ರಕ್ಕೆ ಜೀವ ತುಂಬಿದ ಡೈನಾಮಿಕ್ ಹೀರೋ ದೇವರಾಜ್ ಅವರಿಗಿಂದು 68ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಬಂಧು ಮಿತ್ರರು ಸೇರಿದಂತೆ ಚಿತ್ರರಂಗ ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
1953ರ ಸೆಪ್ಟೆಂಬರ್ 20ರಂದು ನಟ ದೇವರಾಜ್ ಅವರು ಬೆಂಗಳೂರಿನ ಲಿಂಗರಾಜಪುರದಲ್ಲಿ ರಾಮಚಂದ್ರಪ್ಪ ಮತ್ತು ಕೃಷ್ಣಮ್ಮ ದಂಪತಿ ಪುತ್ರನಾಗಿ ಜನಿಸಿದರು. ಮೂರು ತಿಂಗಳ ಮಗುವಾಗಿರುವಾಗಲೇ ತಂದೆಯನ್ನು ಕಳೆದುಕೊಂಡ ಇವರಿಗೆ ತಾಯಿ ಕೃಷ್ಣಮ್ಮನವರೇ ಎಲ್ಲವೂ ಆಗಿದ್ದರು. ಮನೆಯ ಕಠಿಣ ಆರ್ಥಿಕ ಪರಿಸ್ಥಿತಿಯಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿ, ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು. ದೇವರಾಜ್ಗೆ 'ಹೀರೋ' ಆಗುವ ಕನಸು ಇರಲಿಲ್ಲ. ಆದರೆ ಆರ್. ನಾಗೇಶ್ ತಂಡದಲ್ಲಿದ್ದುಕೊಂಡು ನಾಟಕದಲ್ಲಿ ಪಾತ್ರವಹಿಸಿದ್ದರು. ಬಳಿಕ ಸಿನಿಮಾಗಳ ಪೋಷಕ ಪಾತ್ರ ನಿರ್ವಹಿಸಿ, ಅತ್ಯುತ್ತಮ ಹೀರೋ ಆಗಿ ಹೊರಹೊಮ್ಮಿದರು.
ದೇವರಾಜ್ ಅವರು ಅವಿನಾಶ್ ಅವರೊಂದಿಗೆ ತ್ರಿಶೂಲ ಸಿನಿಮಾದ ಆಡಿಷನ್ನಲ್ಲಿ ಭಾಗವಹಿಸಿದರು. ಚಿತ್ರಕ್ಕೆ ಆಯ್ಕೆ ಕೂಡಾ ಆದರು. ಆದರೆ ಚಲನಚಿತ್ರೀಕರಣ ಸಂಪೂರ್ಣಗೊಳ್ಳದೇ ಬಿಡುಗಡೆಯಾಗಲಿಲ್ಲ. ನಂತರ 1986 ರಲ್ಲಿ ಬಿಡುಗಡೆಯಾದ ಅವರ ಮೊದಲ ಚಿತ್ರ 27 ಮಾವಳ್ಳಿ ಸರ್ಕಲ್. ಬಳಿಕ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. 1989ರಲ್ಲಿ ಹತ್ಯಾಕಾಂಡ ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡರು. ಬಹುತೇಕರಿಗೆ ಗೊತ್ತಿರುವಂತೆ ಅವಿನಾಶ್ ಹಾಗೂ ದೇವರಾಜ್ ಇಂದಿಗೂ ಒಳ್ಳೆಯ ಸ್ನೇಹಿತರು.