2023ರ ಕೊನೆಯ ತಿಂಗಳಾದ ಡಿಸೆಂಬರ್ನಲ್ಲಿ ಎರಡು ಬಹು ನಿರೀಕ್ಷೆಯ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದೆಡೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್' ಕೌತುಕ ಹುಟ್ಟಿಸಿದರೆ, ಮತ್ತೊಂದೆಡೆ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಶಾರುಖ್ ಖಾನ್ ಅವರ 'ಡಂಕಿ' ತೆರೆ ಕಾಣಲಿದೆ. ಇವೆರಡೂ ಕೂಡ ವಿಶ್ವದಾದ್ಯಂತ ರಿಲೀಸ್ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳು. ಈಗಾಗಲೇ 'ಹಾಯ್ ನಾನ್ನ' ಮತ್ತು 'ಅನಿಮಲ್' ಚಿತ್ರಗಳು ಥಿಯೇಟರ್ಗಳಲ್ಲಿ ಧೂಳೆಬ್ಬಿಸುತ್ತಿವೆ.
ಇದೀಗ ಮತ್ತೆರಡು ಸ್ಟಾರ್ಗಳ ಸಿನಿಮಾಗಳು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆಯೇ ಚಿತ್ರತಂಡ ಮುಂಗಡ ಬುಕ್ಕಿಂಗ್ ಚುರುಕುಗೊಳಿಸಿದೆ. ಈ ವಾರಾಂತ್ಯದಲ್ಲಿ ಭಾರತದಲ್ಲಿ ಟಿಕೆಟ್ಗಳ ಮಾರಾಟ ಶುರುವಾಗಲಿದೆ ಎನ್ನಲಾಗಿದೆ. ಆದರೆ, ವಿದೇಶಗಳಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಬುಕ್ಕಿಂಗ್ ಆರಂಭವಾಗಿದೆ. ಈ ಎರಡು ಸಿನಿಮಾಗಳ ಟಿಕೆಟ್ಗಳನ್ನು ಅಭಿಮಾನಿಗಳು ಕೂಡ ಭಾರಿ ಸಂಖ್ಯೆಯಲ್ಲಿ ಖರೀದಿಸಿದ್ದಾರೆ.
'ಸಲಾರ್' ಡಿಸೆಂಬರ್ 21ರಂದು ಅಮೆರಿಕದಲ್ಲಿ ಬಿಡುಗಡೆಯಾಗಲಿದೆ. 347 ಸ್ಥಳಗಳಲ್ಲಿ ಸುಮಾರು 1,119 ಸ್ಕ್ರೀನ್ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಆದರೆ, 'ಸಲಾರ್' ಇದುವರೆಗೆ ಸುಮಾರು 22,000 ಟಿಕೆಟ್ಗಳ ಮಾರಾಟದ ಮೂಲಕ $593,657 (ಸುಮಾರು 4.94 ಕೋಟಿ ರೂಪಾಯಿ) ಸಂಗ್ರಹಿಸಿದೆ. ಅಮೆರಿಕಾದಲ್ಲಿ ಈ ಚಿತ್ರಕ್ಕೆ ಎಷ್ಟು ಕ್ರೇಜ್ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ.
ಮತ್ತೊಂದೆಡೆ, 'ಡಂಕಿ' ಚಿತ್ರದ ಮುಂಗಡ ಬುಕ್ಕಿಂಗ್ ಕೂಡ ದಾಖಲೆ ಮಟ್ಟದಲ್ಲಿದೆ ಎಂದು ವರದಿಯಾಗಿದೆ. ಸುಮಾರು 328 ಸ್ಥಳಗಳಲ್ಲಿ 925 ಶೋಗಳಿಗೆ ಸುಮಾರು 6,514 ಟಿಕೆಟ್ಗಳು ಮಾರಾಟವಾಗಿವೆ. ಇದರಿಂದ ಸರಿಸುಮಾರು 90,292 ಡಾಲರ್ ಅಂದರೆ ಸುಮಾರು 75 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ.