ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಡಂಕಿ' ಸಿನಿಮಾ ಗುರುವಾರ ತೆರೆ ಕಂಡು, ಉತ್ತಮ ಪ್ರದರ್ಶನ ಮುಂದುವರೆಸಿದೆ. ಶುಕ್ರವಾರ ಸಲಾರ್ ಬಿಡುಗಡೆ ಆದ ಹಿನ್ನೆಲೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಎರಡೂ ಚಿತ್ರಗಳೂ ಕೂಡ ಭಾರತೀಯ ಚಿತ್ರರಂಗದ ಬಿಗ್ ಪ್ರಾಜೆಕ್ಟ್ ಆಗಿದ್ದು, ಸಲಾರ್ ಎಲ್ಲಾ ವಿಚಾರಗಳಲ್ಲೂ ಒಂದು ಹೆಜ್ಜೆ ಮುಂದಿದೆ ಅಂತಲೇ ಹೇಳಬಹುದು.
ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಂಕಿ ಮೂರು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 70 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದಾಗ್ಯೂ, ಬಾಲಿವುಡ್ ಕಿಂಗ್ ಖ್ಯಾತಿಯ ಶಾರುಖ್ ಖಾನ್ ಅಭಿನಯದ ಈ ಹಿಂದಿನ ಎರಡು ಬ್ಲಾಕ್ಬಸ್ಟರ್ ಸಿನಿಮಾಗಳಾದ ಪಠಾಣ್ ಮತ್ತು ಜವಾನ್ಗೆ ಹೋಲಿಸಿದರೆ ಗಲ್ಲಾಪೆಟ್ಟಿಗೆಯಲ್ಲಿ ಡಂಕಿ ಹಿನ್ನಡೆ ಕಂಡಿದೆ ಅಂತಲೇ ಹೇಳಬಹುದು.
ನಾಲ್ಕು ವರ್ಷಗಳ ಬ್ರೇಕ್ ಬಳಿಕ ಎಸ್ಆರ್ಕೆ ಪಠಾಣ್ ಮತ್ತು ಜವಾನ್ ಸಿನಿಮಾಗಳೊಂದಿಗೆ ಸದ್ದು ಮಾಡಿದರು. ಈ ಎರಡೂ ಸಿನಿಮಾಗಳೂ 1,000 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶ ಕಂಡಿದೆ. 2023ರ ಟಾಪ್ ಕಲೆಕ್ಷನ್ ಮೂವಿಗಳೆಂದರೆ ಅದು ಪಠಾಣ್ ಮತ್ತು ಜವಾನ್. ಹಾಗಾಗಿ ಡಂಕಿ ಮೇಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಸಿನಿಮಾ ಕೊಂಚ ಹಿಂದೆ ಬಿದ್ದಿದೆ ಎಂದು ವರದಿಗಳು ಸೂಚಿಸಿವೆ.