ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಡಂಕಿ' ಡಿಸೆಂಬರ್ 21ರಂದು ತೆರೆ ಕಾಣಲಿದೆ. 2023ರಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಎಸ್ಆರ್ಕೆ ತಮ್ಮ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಡಂಕಿ ಮೂಲಕ ಮತ್ತೊಂದು ಹಿಟ್ ಪಡೆಯುವುದರ ಜೊತೆಗೆ ಹೊಸ ದಾಖಲೆ ನಿರ್ಮಿಸಲು ಅವರು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರೇಮಿಗಳ ಉತ್ಸಾಹ ಹೆಚ್ಚಿಸಿದೆ.
ಚಿತ್ರನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ 'ಡಂಕಿ' ಮುಂಗಡ ಬುಕ್ಕಿಂಗ್ಗೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ವಿದೇಶಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಇಂದಿನಿಂದ ಆರಂಭವಾಗಿದೆ ಎಂದು ತಿಳಿಸಿದೆ. ವರದಿಗಳ ಪ್ರಕಾರ, ಭಾರತದಲ್ಲಿ ಡಿಸೆಂಬರ್ 14ರಂದು ಮುಂಗಡ ಟಿಕೆಟ್ ಬುಕ್ಕಿಂಗ್ ತೆರೆಯಬಹುದು ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಡಿಸೆಂಬರ್ 22ರಂದು ಬಿಡುಗಡೆಯಾಗಲಿದ್ದ 'ಡಂಕಿ' ಒಂದು ದಿನ ಮುಂಚಿತವಾಗಿ ಅಂದರೆ, ಡಿಸೆಂಬರ್ 21ರಂದು ತೆರೆ ಕಾಣುತ್ತಿರುವುದು ವಿಶೇಷ.
ಈವರೆಗೆ ಬಿಡುಗಡೆಯಾದ ಎಲ್ಲಾ ಪೋಸ್ಟರ್ಗಳಲ್ಲಿ ಹಾಗೂ ಚಿತ್ರತಂಡ ನೀಡಿರುವ ಮಾಹಿತಿಗಳಲ್ಲಿ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 22 ಎಂದೇ ನಮೂದಿಸಲಾಗಿತ್ತು. ಆದರೆ, ಅದೇ ದಿನದಂದು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಇದೀಗ ಯಾವುದೇ ಘೋಷಣೆ ಇಲ್ಲದೇ, ಸೈಲೆಂಟಾಗಿಯೇ ನಿರ್ಧರಿತ ಬಿಡುಗಡೆ ದಿನಾಂಕಕ್ಕಿಂತ ಒಂದು ದಿನ ಮೊದಲೇ 'ಡಂಕಿ' ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.