ಈ ಸಿನಿಮಾ ಎಂಬ ಮಾಯಲೋಕ ಯಾರನ್ನ ಯಾವಾಗ ಹೀರೋ ಮಾಡುತ್ತೆ, ಯಾವಾಗ ಜೀರೋ ಮಾಡುತ್ತೆ ಅನ್ನೋದನ್ನ ಹೇಳುವುದು ಕಷ್ಟ. ಈ ಮಾತು ಈಗ ಕನ್ನಡ ಚಿತ್ರರಂದಲ್ಲಿ ಬರೋಬ್ಬರಿ 18 ವರ್ಷಗಳನ್ನ ಪೂರೈಯಿಸಿರುವ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಜೀವನದಲ್ಲಿ ಸತ್ಯವಾಗಿದೆ. ಅದಕ್ಕೆ ಕಾರಣ 2021ರಲ್ಲಿ ಬಂದ ಸಲಗ ಸಿನಿಮಾ!.
ಸಾಮಾಜಿಕ ಸಂದೇಶದ ಜೊತೆಗೆ ಔಟ್ ಆ್ಯಂಡ್ ಔಟ್ ರೌಡಿಸಂ ಕಥೆ ಆಧರಿಸಿ ಬಂದ ಸಲಗ ಸಿನಿಮಾ, ಬಿಡುಗಡೆ ಆದ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಯಿತು. ಬಾಕ್ಸ್ ಆಫೀಸ್ನಲ್ಲಿ 40 ಕೋಟಿ ಬಾಚುವ ಮೂಲಕ ದುನಿಯಾ ವಿಜಯ್ ಸಿನಿಮಾ ಕೆರಿಯರ್ಗೆ ದೊಡ್ಡ ಬ್ರೇಕ್ ಕೊಟ್ಟಿತು. ಇದೀಗ ಈ ಚಿತ್ರ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ದುನಿಯಾ ವಿಜಯ್ ತಮ್ಮ ಕಷ್ಟದ ದಿನಗಳಲ್ಲಿ ಬಿಚ್ಚಿಟ್ಟರು.
ಹೌದು, ಇನ್ನೇನು ದುನಿಯಾ ವಿಜಯ್ ಸಿನಿಮಾ ಕೆರಿಯರ್ ಮುಗಿದೇಹೋಯಿತು ಅಂತಾ ಗಾಂಧಿನಗದಲ್ಲಿ ಮಾತನಾಡುತ್ತಿದ್ದಾಗ ಅವರ ಸಿನಿಮಾ ಜರ್ನಿಗೆ ದೊಡ್ಡ ತಿರುವು ಕೊಟ್ಟಿದ್ದೇ ಈ ಸಲಗ ಚಿತ್ರ. ಅದು ಕೇವಲ 40 ರೂಪಾಯಿಯಿಂದ ಈ ಚಿತ್ರ ಆರಂಭವಾಗಿದ್ದು ಅನ್ನೋದು ವಿಚಿತ್ರ!
ನಾನು ಮೊದಲು ಡೈಲಾಗ್ ರೈಟರ್ ಮಾಸ್ತಿ ಮಂಜು ಅವ್ರನ್ನ ಕರೆದು 40 ರೂ. ಕೊಟ್ಟು ಈ ಸಿನಿಮಾ ಬಗ್ಗೆ ಹೇಳಿದೆ. ಅದಕ್ಕೆ ಮಾಸ್ತಿ ಕೂಡ ಸಂಭಾಷಣೆ ಬರೆಯುವ ಜೊತೆಗೆ ಸಲಗ ಸಿನಿಮಾಗೆ ನಿರ್ಮಾಪಕರನ್ನ ಹುಡುಕುವ ಕೆಲಸ ಸಹ ಶುರುವಿಟ್ಟರು. ಆದರೆ, ಆಗ ಗಾಂಧಿನಗರದಲ್ಲಿ ಅದೆಷ್ಟೋ ಜನ ನಮ್ಮ ಬಗ್ಗೆ ಗೇಲಿ ಮಾಡಿ ಮಾತನಾಡತೊಡಗಿದರು.
ಕೊನೆಗೆ ಟಗರು ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವ್ರು ಈ ಸಿನಿಮಾ ನಿರ್ಮಾಣ ಮಾಡೋದಕ್ಕೆ ಒಪ್ಪಿಕೊಂಡರು. ಹಾಗೇ ಈ ಸಿನಿಮಾ ಶೂಟಿಂಗ್ ಜೊತೆಗೆ ಒಂದೊಂದೆ ಕೆಲಸಗಳು ಶುರುವಾದವು. ಈ ಸಿನಿಮಾಗೆ ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಅದರಲ್ಲಿ ಡೈಲಾಗ್ ರೈಟರ್ ಮಾಸ್ತಿ, ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ಹಲವಾರು ರಂಗಭೂಮಿ ಕಲಾವಿದರ ಶ್ರಮಿವಿದೆ. ಸಿನಿಮಾದಲ್ಲಿ ಉತ್ತಮ ಸಂದೇಶವಿದ್ದ ಕಾರಣ ಪ್ರೇಕ್ಷಕರಿಗೆ ಇಷ್ಟವಾಯಿತು ಎಂದು ಕಷ್ಟದ ದಿನಮಾನಗಳನ್ನು ನೆನಪು ಮಾಡಿಕೊಂಡರು.