ಅಬುಧಾಬಿ: ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ (ಐಐಎಫ್‌ಎ)ಯಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಆಲಿಯಾ ಭಟ್ ಮತ್ತು ಹೃತಿಕ್ ರೋಷನ್ ಕ್ರಮವಾಗಿ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಹಿಂದಿ ಚಲನಚಿತ್ರಗಳ ಪ್ರಶಸ್ತಿ ಸಮಾರಂಭವನ್ನು ಪ್ರತಿ ವರ್ಷ ವಿದೇಶದಲ್ಲಿ ಆಯೋಜಿಸಲಾಗುತ್ತದೆ. ಈ ವರ್ಷ ಯಾಸ್ ದ್ವೀಪದ ಯಾಸ್ ಬೇ ವಾಟರ್‌ಫ್ರಂಟ್‌ನ ಭಾಗವಾಗಿರುವ ಎತಿಹಾದ್ ಅರೆನಾದಲ್ಲಿ ನಡೆಯಿತು.
ಜನಪ್ರಿಯ ಮಲಯಾಳಂ ಚಲನಚಿತ್ರದ ರಿಮೇಕ್ ದೃಶ್ಯಂ 2 ಗಾಗಿ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಕುಮಾರ್ ಮಂಗತ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಸ್ವೀಕರಿಸಿದರು. ಈ ಚಿತ್ರವು ಅತ್ಯುತ್ತಮ ಅಡಾಪ್ಟೆಡ್ ಸ್ಟೋರಿ ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ. ಆಲಿಯಾ ಭಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಅವರು ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಥಿವಾಡಿ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಇದೇ ವೇಳೆ ಆಕ್ಷನ್-ಥ್ರಿಲ್ಲರ್ ಚಿತ್ರ 'ವಿಕ್ರಮ್ ವೇದ್'ಗಾಗಿ ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೃತಿಕ್ ರೋಷನ್, ವಿಕ್ರಮ್ ವೇದ್ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ ನಿರ್ದೇಶಕ ಜೋಡಿ ಪುಷ್ಕರ್ ಮತ್ತು ಗಾಯತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ನಾನು ಅನೇಕ ವರ್ಷ ವೇದಾ ಪಾತ್ರದಲ್ಲಿ ಲೀನನಾಗಿದ್ದೆ. ವೇದಾ ಪಾತ್ರದ ಶೂಟಿಂಗ್ ಅಬುಧಾಬಿಯಲ್ಲಿ ಪ್ರಾರಂಭವಾಗಿತ್ತು, ಈಗ ಮತ್ತೆ ಇಲ್ಲಿಗೆ ಬಂದಿದ್ದೇನೆ ಎಂದರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ: ಶಿವ ಭಾಗ ಒಂದು ಈ ವರ್ಷ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಇದೇ ಚಿತ್ರಕ್ಕಾಗಿ ಶ್ರೇಯಾ ಘೋಷಾಲ್ ಅತ್ಯುತ್ತಮ ಹಿನ್ನೆಲೆ ಗಾಯಕಿ, ಅರಿಜಿತ್ ಸಿಂಗ್ ಅತ್ಯುತ್ತಮ ಹಿನ್ನೆಲೆ ಗಾಯಕ, ಅಮಿತಾಬ್ ಭಟ್ಟಾಚಾರ್ಯ ಅತ್ಯುತ್ತಮ ಗೀತರಚನೆಕಾರ ಮತ್ತು ಮೌನಿ ರಾಯ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಜಗ್ ಜಗ್ ಜೀಯೋ' ಚಿತ್ರಕ್ಕಾಗಿ ನಟ ಅನಿಲ್ ಕಪೂರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರು. ನಟ ಆರ್. ಮಾಧವನ್ ಅವರ ಚೊಚ್ಚಲ ನಿರ್ದೇಶನದ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. 'ಡಾರ್ಲಿಂಗ್ಸ್' ಚಿತ್ರಕ್ಕಾಗಿ ಪರ್ವೇಜ್ ಶೇಖ್ ಮತ್ತು ಜಸ್ಮೀತ್ ರೀನ್ ಅತ್ಯುತ್ತಮ ಮೂಲ ಕಥೆ ಪ್ರಶಸ್ತಿ ಪಡೆದರು.
ಬಾಲಿವುಡ್ ನಟ ದಿವಂಗತ ಇರ್ಫಾನ್ ಖಾನ್ ಅವರ ಪುತ್ರ ಬಾಬಿಲ್ ಖಾನ್ ಅವರು ಕಾಲಾ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಪಡೆದರು. ಇವರು ಗಂಗೂಬಾಯಿ ಕಥಿಯಾವಾಡಿ ನಟ ಶಾಂತನು ಮಹೇಶ್ವರಿ ಅವರೊಂದಿಗೆ ಈ ಪ್ರಶಸ್ತಿ ಹಂಚಿಕೊಂಡರು. ಧೋಖಾ ಅರೌಂಡ್ ದಿ ಕಾರ್ನರ್ ಚಿತ್ರಕ್ಕಾಗಿ ನಟಿ ಖುಶಾಲಿ ಕುಮಾರ್ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಪಡೆದರು. ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರು ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಮಲ್ ಹಾಸನ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಮಲ್ ಹಾಸನ್, ನಾನು ಚಿತ್ರರಂಗದಲ್ಲಿ ಹುಟ್ಟಿ ಬೆಳೆದದ್ದು, ಕಳೆದ ಮೂರೂವರೆ ದಶಕಗಳಿಂದ ಚಿತ್ರರಂಗದ ಭಾಗವಾಗಿದ್ದೇನೆ. ಆದರೂ ನಾನು ಇನ್ನೂ ಬಹಳಷ್ಟು ಮಾಡಬೇಕಾಗಿದೆ ಎಂದು ಭಾವಿಸುತ್ತೇನೆ. ನಾನು ಹಿಂತಿರುಗಿ ಈಗ ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಇದನ್ನೂ ಓದಿ:ವೀರ್ ಸಾವರ್ಕರ್ ಜಯಂತಿಯಂದೇ ರಾಮ್ ಚರಣ್ ನಿರ್ಮಾಣದ 'ದಿ ಇಂಡಿಯನ್ ಹೌಸ್’ ಸಿನಿಮಾ ಘೋಷಣೆ