2023ರ ಬಹುನಿರೀಕ್ಷಿತ ಚಿತ್ರ 'ಡ್ರೀಮ್ ಗರ್ಲ್ 2' ಇಂದು ತೆರೆ ಕಂಡಿತು. ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಬ್ಯೂಟಿ ಅನನ್ಯಾ ಪಾಂಡೆ ನಟನೆಗೆ ಸಿನಿ ಪ್ರೇಮಿಗಳು ತಲೆದೂಗಿದ್ದಾರೆ. ಇದು ಬ್ಲಾಕ್ಬಸ್ಟರ್ 'ಡ್ರೀಮ್ ಗರ್ಲ್'ನ ಮುಂದುವರೆದ ಭಾಗವಾಗಿದೆ. ಈ ಸಿನಿಮಾವನ್ನು ರಾಜ್ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಏಕ್ತಾ ಕಪೂರ್ ನಿರ್ಮಿಸಿದ್ದಾರೆ.
2019 ರಲ್ಲಿ ತೆರೆಕಂಡ 'ಡ್ರೀಮ್ ಗರ್ಲ್' ಚಿತ್ರ ಸಿಕ್ಕಾಪಟ್ಟೆ ಯಶಸ್ಸು ಕಂಡಿತ್ತು. ಥಿಯೇಟರ್ನಲ್ಲಿ ಧೂಳೆಬ್ಬಿಸಿತ್ತು. ಆಯುಷ್ಮಾನ್ ಖುರಾನಾ ಅವರ ಪಾತ್ರವಂತೂ ಎಲ್ಲರನ್ನೂ ನಡೆಗಡಲಿನಲ್ಲಿ ತೇಲಿಸಿತ್ತು. ಪೂಜಾ ಪಾತ್ರದಲ್ಲಿ ನೋಡುಗರನ್ನು ಬಹುವಾಗಿ ಆಕರ್ಷಿಸಿದ್ದರು. ಹೀಗಾಗಿ 'ಡ್ರೀಮ್ ಗರ್ಲ್ 2' ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದರು. ಮುಂದುವರೆದ ಭಾಗ ಯಾವ ರೀತಿ ಇರಬಹುದೆಂಬ ಕುತೂಹಲ ಅವರಲ್ಲಿತ್ತು. ಕೊನೆಗೂ ಇಂದು ಚಿತ್ರ ತೆರೆ ಕಂಡಿದ್ದು, ಇಷ್ಟು ದಿನದ ಕಾಯುವಿಕೆಗೆ ತೆರೆ ಬಿದ್ದಿದೆ.
ಸಿನಿಮಾ ಮೇಲೆ ಪ್ರೇಕ್ಷಕರು ಇಟ್ಟಿದ್ದ ನಿರೀಕ್ಷೆ ಮತ್ತು ಭರವಸೆಯನ್ನು 'ಡ್ರೀಮ್ ಗರ್ಲ್ 2' ಚಿತ್ರತಂಡ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದೇಶದಾದ್ಯಂತ ಸಿನಿಮಾ ನೋಡಲು ಜನರು ಥಿಯೇಟರ್ನಲ್ಲಿ ಮುಗಿಬಿದ್ದಿದ್ದಾರೆ. ಮೊದಲ ಶೋ ವೀಕ್ಷಿಸಿದ ಪ್ರೇಕ್ಷಕರು ಅತ್ಯಂತ ಉತ್ಸಾಹದಿಂದ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ತಮ್ಮ ಅನಿಸಿಕೆ, ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಿನಿ ಪ್ರೇಮಿಗಳು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯನ್ನು ಬಳಸಿಕೊಂಡರು.