ಕನ್ನಡ ಚಿತ್ರರಂಗದ ಐಕಾನ್ ಎಂದೇ ಕರೆಯಲ್ಪಡುವ ಏಕೈಕ ನಟ ಡಾ.ರಾಜ್ಕುಮಾರ್. ಇವರು ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ, ರಸಿಕರ ರಾಜ, ಗಾನ ಗಂಧರ್ವ, ಯೋಗರಾಜ, ಕನ್ನಡದ ಮಾಣಿಕ್ಯ, ಹೀಗೆ ಹತ್ತು ಹಲವು ಹೆಸರು, ಬಿರುದುಗಳನ್ನು ಪಡೆದಿರುವ ಅಣ್ಣಾವ್ರು ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನಲ್ಲಿ ಪೂಜಿಸಲ್ಪಡುತ್ತಿದ್ದಾರೆ.
ಕನ್ನಡಿಗರ ಕಣ್ಮಣಿ ದಿವಂಗತ ಡಾ.ರಾಜ್ಕುಮಾರ್ ಅವರ 94ನೇ ಜನ್ಮದಿನ ಆಡು ಮುಟ್ಟದ ಸೊಪ್ಪಿಲ್ಲ, ಡಾ.ರಾಜ್ಕುಮಾರ್ ಮಾಡದ ಪಾತ್ರಗಳಿಲ್ಲ ಎಂಬುದು ಸ್ಯಾಂಡಲ್ವುಡ್ನಲ್ಲಿ ಪ್ರಚಲಿತದಲ್ಲಿರುವ ಮಾತು. ಅಣ್ಣಾವ್ರು ಇಂದು ಬದುಕಿರುತ್ತಿದ್ದರೆ ಕೋಟ್ಯಂತರ ಅಭಿಮಾನಿಗಳ ಜೊತೆ ಅವರ 94ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಸಾಮಾನ್ಯ ವ್ಯಕ್ತಿಯಾಗಿ ಚಿತ್ರರಂಗಕ್ಕೆ ಬಂದ ರಾಜ್ಕುಮಾರ್ ಕನ್ನಡಿಗರ ಆರಾಧ್ಯ ದೈವವಾಗಿದ್ದಾರೆ.
ಅಣ್ಣಾವ್ರು ಅಂದಾಕ್ಷಣ ನೆನಪಾಗುವುದೇ ಸರಳ ವ್ಯಕ್ತಿತ್ವ ಮತ್ತು ಅವರ ಸಿನಿಮಾಗಳು. ಓರ್ವ ನಟನಾಗಿ, ಗಾಯಕನಾಗಿ, ಕನ್ನಡದ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಟಸಾರ್ವಭೌಮನ ಕೊಡುಗೆ ಚಿತ್ರರಂಗಕ್ಕೆ ಅಪಾರ. ಸದ್ಯ ದೊಡ್ಮನೆ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಆಲದ ಮರದಂತೆ ಬೇರು ಬಿಟ್ಟಿದೆ. ಆ ಬೇರುಗಳು ಬೆಳೆದು ಈಗ ದೊಡ್ಡ ಆಲದ ಮರವೇ ಆಗಿದೆ.
ಹೌದು. ಅಣ್ಣಾವ್ರ ಕುಟುಂಬವನ್ನು ದೊಡ್ಮನೆ ಕುಟುಂಬ ಅಂತಲೇ ಕರೆಯುತ್ತಾರೆ. ಅಣ್ಣಾವ್ರು ಸಿನಿಮಾ ಹೀರೋ ಆಗಲು ಪ್ರಮುಖ ಕಾರಣ ಎಂದರೆ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ. ಇವರು ನಾಟಕಗಳಲ್ಲಿ ಪಾತ್ರ ಮಾಡುತ್ತಾ ನಟ ಆಗಿದ್ದರು. ಇವರ ಬಳಿಕ ಡಾ.ರಾಜ್ಕುಮಾರ್ ಕೂಡ ನಾಟಕಗಳನ್ನು ಮಾಡುತ್ತಾ ಹೀರೋ ಆದರು.
ದೊಡ್ಮನೆಯಲ್ಲಿ ಅಣ್ಣಾವ್ರನ್ನ ಸೇರಿಸಿಕೊಂಡ್ರೆ ಐದು ಜನ ಸ್ಟಾರ್ಗಳಿದ್ದಾರೆ. ಜೊತೆಗೆ ಓರ್ವ ನಿರ್ಮಾಪರು ಇದ್ದಾರೆ. ಡಾ.ರಾಜ್ಕುಮಾರ್ ಜೊತೆಗೆ ಅವರ ಸಹೋದರ ವರದಪ್ಪನವರು ಕೂಡ ಸಿನಿಮಾದಲ್ಲಿ ನಟಿಸುವ ಮೂಲಕ ಹೀರೋ ಆಗಿದ್ರು. ಹಾಗೆಯೇ ಪಾರ್ವತಮ್ಮ ರಾಜ್ಕುಮಾರ್ ದಂಪತಿಯ ಮಕ್ಕಳಾಗಿರುವ ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಕೂಡ ಸ್ಯಾಂಡಲ್ವುಡ್ನ ಸ್ಟಾರ್ಗಳಾಗಿದ್ದಾರೆ.
ದೊಡ್ಮನೆ ವಂಶವೃಕ್ಷದ ಹಿಂದಿರುವ 'ರಾಜಕುಮಾರ' ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಕಟ್ಟಿದ ಪಾರ್ವತಮ್ಮ: ಗಂಡ ಹಾಗೂ ಮಕ್ಕಳು ನಟರಾದರೆ ಪಾರ್ವತಮ್ಮ ರಾಜ್ಕುಮಾರ್ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ನಿರ್ಮಾಪಕಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದರು. ಅಣ್ಣಾವ್ರ ಪತ್ನಿಯಾಗಿ ಪಾರ್ವತಮ್ಮ ರಾಜ್ ಕುಮಾರ್ 1975ರಲ್ಲಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ರು. ತಮ್ಮ ಬ್ಯಾನರ್ ನಲ್ಲಿ ನಿರ್ಮಾಣವಾದ ಮೊಟ್ಟ ಮೊದಲ ಸಿನಿಮಾ ಡಾ.ರಾಜ್ಕುಮಾರ್ ಅಭಿನಯದ ತ್ರಿಮೂರ್ತಿ. ಅಲ್ಲಿಂದ ಪಾರ್ವತಮ್ಮ ಬರೋಬ್ಬರಿ 90ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಕನ್ನಡದ ಮಾಣಿಕ್ಯ ಡಾ.ರಾಜ್ಕುಮಾರ್ ಇನ್ನು ಪಾರ್ವತಮ್ಮ ರಾಜ್ಕುಮಾರ್ ತಮ್ಮ ಜೊತೆಗೆ ಸಹೋದರರಾದ ಶ್ರೀನಿವಾಸ್, ಚಿನ್ನೇಗೌಡ ಹಾಗೂ ಎಸ್.ಎ ಗೋವಿಂದರಾಜ್ ಅವ್ರನ್ನು ನಿರ್ಮಾಪಕರು ಆಗುವಂತೆ ಬೆಳೆಸಿದ್ರು. 60 ಹಾಗೂ 70ರ ದಶಕದಲ್ಲಿ ಪಾರ್ವತಮ್ಮ ಸಹೋದರನಾಗಿರುವ ಶ್ರೀನಿವಾಸ್ ಪ್ರೊಡಕ್ಷನ್ ಕೆಲಸ ಮಾಡ್ತಾ ನಿರ್ಮಾಪಕರಾದ್ರು. ಶ್ರೀನಿವಾಸ್ ನಿರ್ಮಾಪಕರಾಗಿ ಭಾವರಾದ ಅಣ್ಣಾವ್ರಿಗೆ ತಾಯಿಗೆ ತಕ್ಕ ಮಗ, ಶ್ರೀನಿವಾಸ ಕಲ್ಯಾಣ, ವಸಂತ ಗೀತ, ಎರಡು ಕನಸು, ಹೊಸ ಬೆಳಕು ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ರು. ಆದರೆ, ಶ್ರೀನಿವಾಸ್ ಮಕ್ಕಳು ಚಿತ್ರರಂಗಕ್ಕೆ ಬರುವ ಮನಸ್ಸು ಮಾಡಲಿಲ್ಲ.
ಪಾರ್ವತಮ್ಮ ಅವರ ಮತ್ತಿಬ್ಬರು ಸಹೋದರರಾದ ಚಿನ್ನೇಗೌಡ ಹಾಗೂ ಎಸ್.ಎ ಗೋವಿಂದ್ ರಾಜ್ ಇವತ್ತಿಗೂ, ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಮಾಡ್ತಾ ಬ್ಯುಸಿಯಾಗಿದ್ದಾರೆ. ಅದರಲ್ಲಿ ಚಿನ್ನೇಗೌಡ್ರು ಕೂಡ, ಪಾರ್ವತಮ್ಮ ಕಟ್ಟಿ ಬೆಳೆಸಿದ ವಜ್ರೇಶ್ವರಿ ಕಂಬೈನ್ಸ್ನಲ್ಲಿ, ಪ್ರೊಡಕ್ಷನ್ ಕೆಲಸಗಳನ್ನು ಮಾಡ್ತಾ ನಿರ್ಮಾಪಕರಾಗಿದ್ದಾರೆ. ಮನ ಮೆಚ್ಚಿದ ಹುಡುಗಿ, ರೂಪಾಯಿ ರಾಜ, ಶ್ರೀ ಹರಿಕಥೆ, ಮಿಂಚಿನ ಓಟ ಹೀಗೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ 2019ರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರ ಕುಟುಂಬದಿಂದ ಇಬ್ಬರು ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ಗಳಾಗಿದ್ದಾರೆ. ಚಿನ್ನೇಗೌಡ ಅವ್ರ ದೊಡ್ಡ ಮಗ ವಿಜಯ ರಾಘವೇಂದ್ರ ಬಾಲ ನಟ ಹಾಗು ಪೂರ್ಣ ಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಸಕ್ಸಸ್ ಕಂಡಿದ್ದಾರೆ. ವಿಜಯ ರಾಘವೇಂದ್ರ ಸಹೋದರ ಶ್ರೀಮುರಳಿ ಕೂಡ ಸಕ್ಸಸ್ ಫುಲ್ ಹೀರೋ ಆಗಿ ಚಿತ್ರರಂಗದಲ್ಲಿ ಸ್ಟಾರ್ ಡಮ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಶ್ರೀಮುರಳಿ ಹೀರೋ ಆದ್ರೆ, ಅವ್ರ ಪತ್ನಿ ವಿದ್ಯಾ ಕೂಡ ಸಿನಿಮಾ ಕಾಸ್ಟೂಮ್ ಡಿಸೈನರ್ ಆಗಿದ್ದಾರೆ. ಇನ್ನು ಚಿನ್ನೇಗೌಡ ಸಹೋದರರಾದ ಎಸ್.ಎ ಗೋವಿಂದರಾಜ್, ಭಕ್ತ ಪ್ರಹ್ಲಾದ, ಜ್ವಾಲಾಮುಖಿ, ಒಲವು ಗೆಲುವು, ಹೊಸ ಬೆಳಕು ಹೀಗೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರೊಡ್ಯೂಸರ್ ಆಗಿದ್ದಾರೆ. ಆದರೆ, ಇವರ ಮಕ್ಕಳು ಯಾರೂ ಕೂಡ ಚಿತ್ರರಂಗಕ್ಕೆ ಕಾಲಿಡಲಿಲ್ಲ.
ಕನ್ನಡ ಚಿತ್ರರಂಗದಲ್ಲಿ ನೂರು ಸಿನಿಮಾಗಳ ಸರದಾರ ಅಂತಲೇ ಕರೆಸಿಕೊಂಡಿರುವ ನಟ ಡಾ.ಶಿವ ರಾಜ್ಕುಮಾರ್. ಸದ್ಯ ಚಿತ್ರರಂಗದ ಲೀಡರ್ ಆಗಿರುವ ಶಿವಣ್ಣ ಮನೆ ಕಡೆಯಿಂದ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ಇದೆ. ಶಿವಣ್ಣನ ಚಿಕ್ಕ ಮಗಳು ನಿವೇದಿತಾ ಅಪ್ಪನ ಜೊತೆ ಅಂಡಮಾನ್ ಚಿತ್ರದಲ್ಲಿ ಮಿಂಚಿದ್ರು. ಈಗ ನಿವೇದಿತಾ ವೆಬ್ಸೀರಿಸ್ಗಳನ್ನು ನಿರ್ಮಾಣ ಮಾಡುತ್ತಾ ಪ್ರಾಡ್ಯೂಜರ್ ಆಗಿದ್ದಾರೆ. ಶಿವಣ್ಣ ಮತ್ತು ಮಗಳು ನಿವೇದಿತಾ ಅಲ್ಲದೇ ತಾಯಿ ಗೀತಾ ಶಿವರಾಜ್ ಕುಮಾರ್ ಕಾಸ್ಟೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಗೀತಾ ಶಿವರಾಜ್ ಕುಮಾರ್ ಕುಟುಂಬದಿಂದ ಇಬ್ಬರು ಸಹೋದರರಾದ ಕುಮಾರ ಬಂಗಾರಪ್ಪ ಹಾಗು ಮಧು ಬಂಗಾರಪ್ಪ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಶಿವ ರಾಜ್ಕುಮಾರ್ ಬಳಿಕ, ರಾಘವೇಂದ್ರ ರಾಜ್ಕುಮಾರ್ ನಟನಾಗಿ, ನಿರ್ಮಾಪಕನಾಗಿ ಸಕ್ಸಸ್ ಕಂಡವರು. ಅವರ ಮಕ್ಕಳಾದ ವಿನಯ್ ರಾಜ್ಕುಮಾರ್ ಈಗಾಗಲೇ ಇಂಡಸ್ಟ್ರಿಯಲ್ಲಿ ನಟನಾಗಿ ಗಮನ ಸೆಳೆದಿದ್ದಾರೆ. ಇನ್ನು ಅವರ ಎರಡನೇ ಮಗ ಯುವ ರಾಜ್ಕುಮಾರ್ 'ಯುವ' ಚಿತ್ರದ ಮೂಲಕ ಮಿಂಚಲು ಸಜ್ಜಾಗಿದ್ದಾರೆ.
ಇವರ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಾಲನಟನಾಗಿ, ಸ್ಟಾರ್ ಹೀರೋ ಆಗಿ, ನಿರ್ಮಾಪಕರಾಗಿ, ಗಾಯಕರಾಗಿ ಸಕ್ಸಸ್ ಫುಲ್ ಹೀರೋ ಆಗಿದ್ದಾರೆ. ಆದರೆ, ಚಿಕ್ಕ ವಯಸ್ಸಿನಲ್ಲೇ ಅವರು ವಿಧಿವಶರಾಗಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಇನ್ನು ಪುನೀತ್ ರಾಜ್ಕುಮಾರ್ ಬಳಿಕ ಪತ್ನಿ ಅಶ್ವಿನಿ ಸದ್ಯ ನಿರ್ಮಾಪಕಿಯಾಗಿ ಗಮನ ಸೆಳೆಯುತ್ತಿದ್ದಾರೆ. ಇನ್ನು ಪಾರ್ವತಮ್ಮ ರಾಜ್ಕುಮಾರ್ ಎರಡನೇ ಮಗಳಾದ ಪೂರ್ಣಿಮಾ ಅವರು ಮದುವೆ ಆಗಿರೋದು ನಟ ರಾಮ್ ಕುಮಾರ್ ಅವರನ್ನು.
ರಾಮ್ ಕುಮಾರ್ ಅಂದಾಕ್ಷಣ ಒಂದು ಕಾಲದ ಸ್ಟಾರ್ ಹೀರೋ ಆಗಿ ಮಿಂಚಿದವರು. ಈಗ ಇವ್ರ ಫ್ಯಾಮಿಲಿಯಿಂದ ಮಕ್ಕಳಾದ ಧೀರೇನ್ ರಾಮ್ ಕುಮಾರ್ ಮತ್ತು ಧನ್ಯಾ ರಾಮ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ:ತಮಿಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಗೆದ್ದು ಬಂದ 'ಆ ದಿನಗಳು' ಖ್ಯಾತಿಯ ಸರ್ದಾರ್ ಸತ್ಯ