ಸ್ಯಾಂಡಲ್ವುಡ್ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ ಶುರುವಾಗ್ತಿದೆ. ಸಿಸಿಎಲ್ ಕ್ರಿಕೆಟ್ ಲೀಗ್ ಬೆನ್ನಲ್ಲೇ ಡಾ.ರಾಜ್ ಕಪ್ ಸೀಸನ್ 6ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಇದೇ ಜೂನ್ 17 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ಧ್, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಈ ವೇಳೆ ರಾಜೇಶ್ ಬ್ರಹ್ಮಾವರ ಮಾತನಾಡಿ, "ಇದೇ 17ಕ್ಕೆ ದುಬೈನಲ್ಲಿ ರಾಜ್ ಕಪ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ. 1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ. ದುಬೈನಲ್ಲಿ ನಡೆಯುವ ಆಟಗಾರರ ಹರಾಜಿನಲ್ಲಿ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾಗಿಯಾಗಲಿದ್ದಾರೆ" ಎಂದು ತಿಳಿಸಿದರು.