ಕನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಶೋನ ಅತಿಥಿಯಾಗಿ ಹೃದಯ ತಜ್ಞ, ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಆಗಮಿಸಿ ಸಾಧಕರ ಸೀಟ್ಗೆ ಸಾರ್ಥಕತೆ ತಂದುಕೊಟ್ಟಿದ್ದಾರೆ. ಕಾರ್ಯಕ್ರಮ ಆರಂಭವಾಗಿ ಮೊದಲ ಅತಿಥಿಗಳಾಗಿ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ, ನಟ - ನಿರ್ದೇಶಕ ಪ್ರಭು ದೇವ ಆಗಮಿಸಿದ್ದರು. ನಿನ್ನೆ ರಾತ್ರಿ ಪ್ರಸಾರವಾಗಿರುವ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದ ಸಾಧಕ ಡಾ. ಮಂಜುನಾಥ್ ತಮ್ಮ ಸಾಧನೆಯ ಕಥೆಯನ್ನು ವೀಕ್ಷಕರ ಮುಂದಿಟ್ಟಿದ್ದಾರೆ. ಈ ಎಪಿಸೋಡ್ಗೆ ಕನ್ನಡಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.
2006ರಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯಾರಂಭ ನಡೆಸಿರುವ ಡಾ. ಮಂಜುನಾಥ್, ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಸೇವೆಗೆ ಹೆಸರಾಗಿದ್ದಾರೆ. ಈ ಹೆಸರಾಂತ ಸಂಸ್ಥೆಯಿಂದ 50 ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 6 ಲಕ್ಷಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆಯ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ವೈಯಕ್ತಿಕವಾಗಿ 54 ಸಾವಿರ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಇವರ ಅಪಾರ ನಿಸ್ವಾರ್ಥ ಸೇವೆಗೆ ಶ್ರೇಷ್ಠ ಪದ್ಮಶ್ರೀ ಪ್ರಶಸ್ತಿ ಕೂಡ ಸಂದಿದೆ. ಕೇವಲ 5 ದಿನಗಳಲ್ಲಿ 200 ಆ್ಯಂಜಿಯೋಪ್ಲಾಸ್ಟಿ ಉಚಿತ ಶಸ್ತ್ರ ಚಿಕಿತ್ಸೆ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ 17 ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಡಾ. ಮಂಜುನಾಥ್ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯ, ಕುಟುಂಬ, ಶಿಕ್ಷಣ ಬಳಿಕ ವೃತ್ತಿಜೀವನದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರಿಂದ ಸೇವೆ ಪಡೆದವರು ಮತ್ತವರ ಕುಟುಂಬಸ್ಥರು ಬಂದು ಮಂಜುನಾಥ್ ಅವರ ಸೇವೆ ಬಗ್ಗೆ ಮಾತನಾಡಿ ನಮಸ್ಕರಿಸಿದ್ದಾರೆ. ಓರ್ವರಂತೂ ಇವರನ್ನು ಜಯದೇವ ಸಂಸ್ಥೆಯ ಮಂಜುನಾಥ ಸ್ವಾಮಿ ಎಂದೇ ವರ್ಣನೆ ಮಾಡಿದ್ದಾರೆ. ಕಾರ್ಯಕ್ರಮದ ಬಳಿಕ ಡಾ. ಮಂಜುನಾಥ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ವೀಕೆಂಡ್ ವಿತ್ ರಮೇಶ್' ಒಂದು ವಿಶಿಷ್ಟ ಕಾರ್ಯಕ್ರಮ. ನನಗೆ ಬಹಳ ಖುಷಿ ಆಯಿತು ಎಂದು ತಿಳಿಸಿದ್ದಾರೆ.
ವೀಕ್ಷಕರ ಅಭಿಪ್ರಾಯವೇನು? ಈ ಕಾರ್ಯಕ್ರಮಕ್ಕೆ ತಮ್ಮ ಜೀವಮಾನದ ಸಾಧನೆ ಮತ್ತು ಅನುಭವಗಳನ್ನು ಹಂಚಿಕೊಂಡು ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ, ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. 'ವೀಕೆಂಡ್ ವಿತ್ ರಮೇಶ್ ಅನ್ನೋ ಪೋಗ್ರಾಮ್ಗೆ ಇಂದು ಕಳೆ ಬಂತು, ಸೂಪರ್ ಸರ್' ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ. 'ಇಂಥ ಮಹಾನ್ ವ್ಯಕ್ತಿಗಳ ಸಂಚಿಕೆ ಒಂದೇ ದಿನಕ್ಕೆ ಮುಗಿಸೋದು ಬೇಸರದ ಸಂಗತಿ' ವೀಕ್ಷಕರೋರ್ವರು ಅಸಮಧಾನ ವ್ಯಕ್ತಪಡಿಸಿದ್ದಾರೆ. 'ಒಂದರ್ಥದಲ್ಲಿ ಇವರು ನಿಜವಾದ ದೇವತಾ ಮನುಷ್ಯ, ಹೃದಯ ಸಮಸ್ಯೆ ಎದುರಿಸುವ ರೋಗಿಗಳ ಜೀವ ಉಳಿಸಲು ಮಾನವೀಯತೆಗೆ ಮೊದಲ ಆದ್ಯತೆ ಅಂತ ಬೋರ್ಡ್ ಹಾಕಿದ್ದಾರೆ ಆಸ್ಪತ್ರೆಯಲ್ಲಿ, ಹಾಗೆ ವ್ಯವಸ್ಥೆಯನ್ನು ಮಾಡಿದ್ದಾರೆ' ಎಂದು ಮಂಜುನಾಥ್ ಬಗ್ಗೆ ಅಭಿಮಾಯೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಮಂಜುನಾಥ ಅವರ ಸಾಧನೆಗೆ ಒಂದು ಎಪಿಸೋಡ್ ಸಾಕಾಗಲ್ಲ. ಅವರ ಒಂದೊಂದು ನುಡಿಗಳು ಇಂದಿನ ಮಕ್ಕಳಿಗೆ ಪ್ರೇರಣೆ ಆಗಬೇಕು. ಆದರೆ ಇಂಥವರ ಕಾರ್ಯಕ್ರಮ ಒಂದು ಎಪಿಸೋಡ್ ಮಾಡಿ, ಅದರಲ್ಲಿ ಮತ್ತೆ ಅನ್ಸೀನ್ ತೋರಿಸಿದ್ದು ಎಷ್ಟು ನ್ಯಾಯ. ಇವರ ಕಾರ್ಯಕ್ರಮ 2 ಎಪಿಸೋಡ್ ಇದ್ದರೆ ತುಂಬಾ ಚೆನ್ನಾಗಿ ಇರುತಿತ್ತು' ಎಂದು ಓರ್ವರು ತಿಳಿಸಿದ್ದಾರೆ.