ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಗುರುತಿಸಿಕೊಂಡಿರುವ ನಟಿ ಮೇಘನಾ ರಾಜ್ ಸಣ್ಣ ಬ್ರೇಕ್ ಬಳಿಕ ಸಿನಿಮಾಗೆ ಮರಳಿದ್ದಾರೆ. ಪ್ರಮುಖ ಪಾತ್ರದಲ್ಲಿ ಮೇಘನಾ ರಾಜ್ ಅಭಿನಯಿಸಿದ್ದು, ವಿಶಾಲ್ ಆತ್ರೇಯ ನಿರ್ದೇಶನ ಮಾಡಿರುವ 'ತತ್ಸಮ ತದ್ಭವ' ಸ್ಯಾಂಡಲ್ವುಡ್ನಲ್ಲಿ ಒಂದಲ್ಲೊಂದು ವಿಚಾರವಾಗಿ ಗಮನ ಸೆಳೆಯುತ್ತಿದೆ. ಸಿನಿಪ್ರಿಯರು ಚಿತ್ರದ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ದೂರಿ ಲಾಲಿ ಹಾಡು...: ಶೀರ್ಷಿಕೆಯಿಂದ ಕುತೂಹಲ ಹುಟ್ಟಿಸಿರುವ ತತ್ಸಮ ತದ್ಭವ ಚಿತ್ರ ಸಣ್ಣ ಟೀಸರ್ನಿಂದ ಭರವಸೆ ಹುಟ್ಟಿಸಿದೆ. ಇತ್ತೀಚೆಗೆ ಚಿತ್ರದ ಮೊದಲ ಹಾಡು 'ದೂರಿ ಲಾಲಿ' ಬೆಟೆಲ್ (Betel) ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಆಗಿದ್ದು, ಜನಮನ ಗೆಲ್ಲುತ್ತಿದೆ. ವಾಸುಕಿ ವೈಭವ್ ಹಾಡು ಬರೆದು, ಸಂಗೀತ ನೀಡಿದ್ದಾರೆ. ಸುನಿಧಿ ಗಣೇಶ್ ಹಾಡಿದ್ದಾರೆ. ಮೇಘನಾ ರಾಜ್ ಹಾಗೂ ಮಹತಿ ಅಭಿನಯಿಸಿದ್ದಾರೆ.
'ದೂರಿ ಲಾಲಿ ಚಾಲೆಂಜ್': ಹಾಡು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಅಮ್ಮಂದಿರಿಗೆ ಒಂದು ಚಾಲೆಂಜ್ ನೀಡಿದೆ. ಈಗಾಗಲೇ ಸಿನಿ ಪ್ರೇಮಿಗಳ, ಗಾನಪ್ರಿಯರ ಮನಸ್ಸು ಕದ್ದಿರುವ 'ದೂರಿ ಲಾಲಿ' ಹಾಡನ್ನು ಹಾಡುತ್ತಾ (ತಾಯಿಯರು) ತಮ್ಮ ಮಗುವನ್ನು ಹೇಗೆ ಮಲಗಿಸುತ್ತೀರಾ? ಎಂಬ ವಿಡಿಯೋವನ್ನು ನಿಮ್ಮ ಇನ್ಸ್ಟಾಗ್ರಾಮ್ ಮೂಲಕ ಈ ಕೆಳಕಂಡ ಐಡಿಗೆ ಟ್ಯಾಗ್ ಮಾಡುವಂತೆ ತಿಳಿಸಿದೆ.
ಈ ಇನ್ಸ್ಟಾಗ್ರಾಮ್ ಐಡಿಗಳಿಗೆ ಟ್ಯಾಗ್ ಮಾಡಿ:ನಿಮ್ಮ ವಿಡಿಯೋಗಳನ್ನು @megsraj @prajwaldevaraj @pannagabharana @vishal.atreya @vasuki_vaibhav_ @pbstudios_productions @anvitcinemas @tatsamatadbhava @betelmusic.in ಇನ್ಸ್ಟಾಗ್ರಾಮ್ ಐಡಿಗಳಿಗೆ ಟ್ಯಾಗ್ ಮಾಡಬೇಕು. ಈ ವಿಡಿಯೋಗಳ ಪೈಕಿ ಮೂರನ್ನು ಆಯ್ಕೆ ಮಾಡಲಾಗುವುದು. ಆ ಮೂವರು ತಮ್ಮ ಮಕ್ಕಳೊಂದಿಗೆ ನಟಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಊಟ ಮಾಡುತ್ತಾ, ಮಾತುಕತೆ ನಡೆಸಬಹುದು ಎಂದು ಚಿತ್ರತಂಡ ಹೇಳಿದೆ.