ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಶ್ರಮ, ಪ್ರತಿಭೆ ಇದ್ದರೆ ಯಾರು ಏನು ಬೇಕಾದರೂ ಆಗಬಹು. ಅದಕ್ಕೆ ತಾಜಾ ಉದಾಹರಣೆ ಎಂದರೆ ಸದ್ಯ ಕನ್ನಡ, ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್. ಹೌದು ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಪೂರೈಸಿದ್ದಾರೆ. ಈ ಒಂದು ದಶಕದ ಸಿನಿ ಪಯಣದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.
ಧನಂಜಯ್ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಹುಡುಗ. ಬಾಲ್ಯದಲ್ಲಿ ತಮ್ಮ ತಂದೆಯೊಂದಿಗೆ ಹಳ್ಳಿಯಲ್ಲಿ ನಾಟಕಗಳನ್ನು ನೋಡ್ತಾ ನೋಡ್ತಾ ಸಿನಿಮಾ ಆಸಕ್ತಿ ಬೆಳೆಸಿಕೊಂಡರು. ಎಷ್ಟೇ ಅವಮಾನ, ಟೀಕೆ, ಕಷ್ಟ ಎದರುರಾದರೂ ಎಲ್ಲವನ್ನೂ ಮೆಟ್ಟಿ ಯಶಸ್ಸನ್ನು ಕಂಡ ಹಳ್ಳಿ ಹೈದ ಧನಂಜಯ್.
ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಧನಂಜಯ್ ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ, ಗುರು ಪ್ರಸಾದ್ ನಿರ್ದೇಶನದ ಡೈರೆಕ್ಟರ್ ಸ್ಪೆಷಲ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಾರೆ. ಆದರೆ ಈ ಸಿನಿಮಾ ಅಂದುಕೊಂಡಂತೆ ಧನಂಜಯ್ ಅವರಿಗೆ ಹೆಸರು ತಂದು ಕೊಡುವುದಿಲ್ಲ. ಈ ಚಿತ್ರದ ನಂತರ ಧನಂಜಯ್, ರಾಟೆ, ಬಾಕ್ಸರ್, ಜೆಸ್ಸಿ, ಬದ್ಮಾಶ್, ಎರಡನೇ ಸಲ, ಅಲ್ಲಮ ಮುಂತಾದ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಅಷ್ಟೇನೂ ಸುದ್ದಿ ಮಾಡಲಿಲ್ಲ. ಧನಂಜಯ್ ಒಂದು ದೊಡ್ಡ ಯಶಸ್ಸನ್ನು ಕಾಣಲು 2018ರಲ್ಲಿ ಬಿಡುಗಡೆಯಾದ ಶಿವ ರಾಜ್ಕುಮಾರ್ ಅಭಿನಯದ ಹಾಗು ಸೂರಿ ನಿರ್ದೇಶನದ ಟಗರು ಚಿತ್ರದವರೆಗೂ ಕಾಯಬೇಕಾಯಿತು.
ಧನಂಜಯ್ ದೊಡ್ಡ ಮಟ್ಟದ ಗೆಲುವು ಕಂಡಿದ್ದು, ಸೂರಿ ನಿರ್ದೇಶನದ ಟಗರು ಚಿತ್ರ. ಈ ಚಿತ್ರದಲ್ಲಿ ಡಾಲಿ ಎಂಬ ವಿಲನ್ ಆಗಿ ಕಾಣಿಸಿಕೊಂಡ ಧನಂಜಯ್, ಮೊದಲ ಬಾರಿಗೆ ದೊಡ್ಡ ಯಶಸ್ಸು ಕಂಡರು. ಅಷ್ಟೇ ಅಲ್ಲ ಧನಂಜಯ್ ಸಿನಿಮಾ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ ಕೂಡ ಹೌದು. ಈ ಸಿನಿಮಾ ನಂತರ ಡಾಲಿ ಎಂದೇ ಧನಂಜಯ್ ಫೇಮಸ್ ಆದರು.