ಬಹು ನಿರೀಕ್ಷಿತ ಹೆಡ್ ಬುಷ್ ಸಿನಿಮಾ ಇದೇ ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಅಬ್ಬರಿಸಲಿದ್ದು, ಇಂದು ಹೆಡ್ ಬುಷ್ ಸಾಂಗ್ ರಿಲೀಸ್ ಆಗಿದೆ. ಎಲ್ಲಾ ಪೇಟೇಲು ನಿಮ್ಮದೇ ಖದರ್! ನಿಮ್ಮ ಅಭಿನಯಕ್ಕೆ ನಾವು ಸನ್ನಾರ್! headbush ಇಂದ ಆಗಲಿ ಎಲ್ಲಾ ರೆಕಾರ್ಡ್ ಪಂಕ್ಚರ್ ಎಂದು ಆನಂದ್ ಆಡಿಯೋ ಸಂಸ್ಥೆ ವಿಶೇಷವಾಗಿ ಶುಭಾಶಯ ಕೋರಿದೆ.
ಭರ್ಜರಿ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆನಂದ್ ಆಡಿಯೋ ಸಂಸ್ಥೆ ಹೆಡ್ ಬುಷ್ ಸಾಂಗ್ ಹಂಚಿಕೊಂಡು ಶುಭಕೋರಿದೆ. 'ನಾವು ರೌಡಿಗಳು' ಎಂದು ಶುರುವಾಗುವ 'ರೌಡೀಸ್ ಆ್ಯಂಥಮ್'ನಲ್ಲಿ ಬೆಂಗಳೂರು ಭೂಗತ ಲೋಕದ ಆ ದಿನಗಳ ದರ್ಶನ ಮಾಡಿಸುವ ಪ್ರಯತ್ನ ನಡೆದಿದೆ.
ಹೆಡ್ ಬುಷ್ ಸಿನಿಮಾ ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್ ಎಂ.ಪಿ ಜಯರಾಜ್ ಅವರ ಜೀವನಾಧಾರಿತ ಸಿನಿಮಾ. ಚಿತ್ರೀಕರಣ ಮುಗಿದಿರುವ ಹೆಡ್ ಬುಷ್ ಸಿನಿಮಾವನ್ನು ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದೆಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಡಾಲಿ ಧನಂಜಯ್ ಎಂ.ಪಿ ಜಯರಾಜ್ ಸ್ಟೈಲ್ನಲ್ಲಿ ಸಿಗರೇಟ್ ಸೇದುವ ಪೋಸ್ಟರ್, ಟೀಸರ್ ಸಖತ್ ಸೌಂಡ್ ಮಾಡಿದೆ.