ಪವನ್ ಒಡೆಯರ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡಿ ತಮ್ಮದೇ ಛಾಪು ಮೂಡಿಸಿರೋ ನಿರ್ದೇಶಕ. ನಿರ್ದೇಶನದ ಜೊತೆಗೆ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿ ಹೆಜ್ಜೆ ಇಟ್ಟಿದ್ದಾರೆ.
ಆರಂಭದಿಂದಲೂ ಈ ಚಿತ್ರ ತಮ್ಮ ಕಂಟೆಂಟ್ ಮೂಲಕ ಭಾರೀ ಸದ್ದು ಮಾಡ್ತಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಪ್ರಶಸ್ತಿ ಸೇರಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಹಾಗೂ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಭಾರೀ ಮೆಚ್ಚುಗೆ ಪಡೆದಿರುವ ಡೊಳ್ಳು ಚಿತ್ರದ ಮಾಯಾನಗರಿ ಸಾಂಗ್ ಅನಾವರಣಗೊಂಡಿದೆ.
ಡಾಲಿ ಧನಂಜಯ್ ಡೊಳ್ಳು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಯಾನಗರಿ ಎಂಬ ಹಾಡು ಇದಾಗಿದ್ದು, ತಾವು ಬೆಂಗಳೂರಿಗೆ ಬಂದ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಾಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಪ್ರಾಸಬದ್ಧ ಪದಪುಂಜಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದಾರೆ. ಆನಂತ್ ಕಾಮಂತ್ ಸಂಗೀತದ ಇಂಪು ತುಂಬಿರುವ ಹಾಡಿಗೆ ನಿರ್ದೇಶಕ ಸಾಗರ್ ಪುರಾಣಿಕ್ ಧ್ವನಿಯಾಗಿದ್ದಾರೆ. ಈ ಮೂಲಕ ಸಾಗರ್ ಗಾಯಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.