ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಥಾಹಂದರದ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಆ ಸಾಲಿಗೆ ಸೇರುವ ಗ್ರಾಮೀಣ ಸೊಗಡಿನ "ದೊಡ್ಡಹಟ್ಟಿ ಬೋರೇಗೌಡ" ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ದೊಡ್ಡಹಟ್ಟಿ ಬೋರೇಗೌಡ ಟ್ರೈಲರ್: ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮೊದಲಿಗೆ ಮಾತನಾಡಿದ ನಿರ್ದೇಶಕ ಕೆ.ಎಂ.ರಘು, ನಾನು ಈ ಹಿಂದೆ ತರ್ಲೆ ವಿಲೇಜ್, ಪರಸಂಗ ಚಿತ್ರಗಳನ್ನು ನಿರ್ದೇಶಿಸಿದ್ದೆ. ಈಗ ಗ್ರಾಮೀಣ ಸೊಗಡಿನ "ದೊಡ್ಡಹಟ್ಟಿ ಬೋರೇಗೌಡ" ಚಿತ್ರವನ್ನು ನಿರ್ದೇಶಿಸಿದ್ದೇನೆ. ನಮ್ಮ ಚಿತ್ರ ಗ್ರಾಮೀಣ ಮನೆಯ ಸುತ್ತ ಹೆಣೆಯಲಾಗಿರುವ ಕಥೆಯಾಗಿದೆ. ಹಳ್ಳಿಯಲ್ಲಿ ಬಡವರಿಗೆ ಸರ್ಕಾರದಿಂದ ನೀಡುವ ಆಶ್ರಯ ಯೋಜನೆ ಮನೆಯನ್ನು ವ್ಯಕ್ತಿಯೊಬ್ಬ ಪಡೆದುಕೊಳ್ಳಲು ಯಾವ ರೀತಿ ಕಷ್ಟ ಪಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ.
ಅತ್ಯುತ್ತಮ ಚಿತ್ರ ಪ್ರಶಸ್ತಿ: ನಮ್ಮ ಚಿತ್ರಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ದೊರಕಿದೆ. ಇದು ಕಲಾತ್ಮಕ ಚಿತ್ರ ಅಲ್ಲ. ಕಮರ್ಷಿಯಲ್ ಚಿತ್ರ. ನನ್ನ ಪ್ರಕಾರ ಆರರಿಂದ ಅರವತ್ತು ವರ್ಷಗಳ ತನಕ ಎಲ್ಲರಿಗೂ ಹಿಡಿಸುವ ಚಿತ್ರಗಳು ಕಮರ್ಷಿಯಲ್ ಚಿತ್ರಗಳೇ. ಈ ಸಿನಿಮಾದಲ್ಲಿ ಗ್ರಾಮೀಣ ಪ್ರತಿಭೆಗಳೇ ಅಭಿನಯಿಸಿರುವುದು ವಿಶೇಷ. ಮೂರು ತಿಂಗಳ ಕಾಲ ಎಲ್ಲರಿಗೂ ತರಬೇತಿ ನೀಡಿ ಚಿತ್ರೀಕರಣ ಮಾಡಲಾಗಿದೆ ಎಂದರು.