ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಪಾರ್ವತಮ್ಮ ರಾಜ್ಕುಮಾರ್ ತಮ್ಮನ ಮಗನ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು? ಮೈಸೂರು:ಕನ್ನಡ ಚಿತ್ರರಂಗದ ವರನಟ ದಿವಂಗತ ಡಾ.ರಾಜ್ಕುಮಾರ್ ಅವರ ಪತ್ನಿ ದಿವಂಗತ ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರ ಎಸ್.ಎ ಶ್ರೀನಿವಾಸ್ ಪುತ್ರ ಸೂರಜ್ ಕುಮಾರ್ (ಧೀರಜ್) ಕೆಲವು ದಿನಗಳ ಹಿಂದೆ ರಸ್ತೆ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಿದ್ದರು. ಸದ್ಯ ಅವರಿಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಮಾಧ್ಯಮದೊಂದಿಗೆ ಆಸ್ಪತ್ರೆಯ ವೈದ್ಯ ಡಾ.ಅಜಯ್ ಹೆಗ್ಡೆ ಹಾಗೂ ಸಹೋದರಿ ವರಲಕ್ಷ್ಮಿ ಶ್ರೀನಿವಾಸ್ ಅವರು ಸೂರಜ್ ಆರೋಗ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸರ್ಜರಿ ಮಾಡಿ ಕಾಲು ತೆಗೆದಿದ್ದೇವೆ..: "ಅಪಘಾತವಾದ ತಕ್ಷಣವೇ ಸೂರಜ್ ಕುಮಾರ್ರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ನಾವು ಆತನನ್ನು ಪರೀಕ್ಷೆ ಮಾಡಿದಾಗ ಕಾಲು ತೆಗೆಯಬೇಕೋ, ಬೇಡವೋ ಎಂಬ ಬಗ್ಗೆ ಖಚಿತವಾಗಿ ತಿಳಿದಿರಲಿಲ್ಲ. ಆ ನಂತರ ಚೆಕ್ ಮಾಡಿದಾಗ, ಕಾಲಿನಲ್ಲಿ 6 ಇಂಚು ಬೋನ್ ಇರಲಿಲ್ಲ. ತೊಡೆಯಲ್ಲೂ 6 ಇಂಚಿನಷ್ಟು ಬೋನ್ ಇರಲಿಲ್ಲ. ನಂತರ ಅವರ ಕುಟುಂಬದವರನ್ನು ಸಂಪರ್ಕಿಸಿದೆವು. ಸೂರಜ್ನನ್ನು ಉಳಿಸಲು ನಿರ್ಧಾರ ಮಾಡಿದೆವು"
"ಕೊನೆಗೆ ಸರ್ಜರಿ ಮಾಡಿ ಬಲಗಾಲನ್ನು ಮಂಡಿಯ ಕೆಳಗಿನವರೆಗೆ ತೆಗೆದಿದ್ದೇವೆ. ಈಗಾಗಲೇ ಕೆಲವು ಸರ್ಜರಿ ಮಾಡಲಾಗಿದ್ದು, ಇನ್ನು ಕೆಲವು ಬಾಕಿಯಿದೆ. ಸೂರಜ್ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ತುಂಬಾ ಕಡಿಮೆ ಇದೆ. ಈಗ ಪರವಾಗಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಈಗ ಏನೂ ಹೇಳಲು ಸಾಧ್ಯವಿಲ್ಲ. ಅವರ ಕಾಲು ತೆಗೆದ ವಿಚಾರ ಅವರಿಗೆಯೇ ಮೂರು ದಿನ ಗೊತ್ತೇ ಇರಲಿಲ್ಲ" ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಅಜಯ್ ಹೆಗ್ಡೆ, ಸೂರಜ್ ಆರೋಗ್ಯದ ಬಗ್ಗೆ ವಿವರಿಸಿದ್ದಾರೆ.
ತಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸಿ..: "ಕಳೆದ ಶನಿವಾರ ಸೂರಜ್ ಒಬ್ಬನೇ ಮನೆಯಿಂದ ಬೈಕ್ನಲ್ಲಿ ಹೊರಟಿದ್ದ. ತಾಯಿಯಲ್ಲಿ ಊಟಿಗೆ ಹೋಗಿ ನಾಳೆ ಬರುತ್ತೇನೆ ಎಂದು ಹೇಳಿದ್ದ. ಆದರೆ ಶನಿವಾರ ಮಧ್ಯಾಹ್ನದ ವೇಳೆ ಟಿಪ್ಪರ್ ಮುಂದೆಯಿಂದ ಬಂದು ಬೈಕ್ಗೆ ಗುದ್ದಿದೆ. ಆ ವೇಳೆ ಅಲ್ಲೇ ಇದ್ದ ಜನರು ನನ್ನ ತಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಆತನ ಪ್ರಾಣ ಉಳಿಸಲು ಬಲಗಡೆಯ ಕಾಲಿನ ಗಾಯಗೊಂಡಿದ್ದ ಭಾಗವನ್ನು ತೆಗೆದಿದ್ದಾರೆ"
"ತಮ್ಮನ ಪ್ರಾಣ ಉಳಿಸಿದ ಡಾಕ್ಟರ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ತನಿಖೆಗೆ ನಾವು ಸಹಕಾರ ನೀಡುತ್ತೇವೆ" ಎಂದು ಸೂರಜ್ ಕುಮಾರ್ ಅಕ್ಕ ವರಲಕ್ಷಿ ಶ್ರೀನಿವಾಸ್ ಹೇಳಿದ್ದಾರೆ. ಜೊತೆಗೆ, "ನನ್ನ ತಮ್ಮನ ಆರೋಗ್ಯಕ್ಕಾಗಿ, ಅವನು ಆದಷ್ಟು ಬೇಗ ಗುಣಮುಖನಾಗಲು ಪ್ರಾರ್ಥಿಸಿ" ಎಂದು ಇಡೀ ಜನತೆಯಲ್ಲಿ ವಿನಂತಿ ಮಾಡಿದ್ದಾರೆ.
ಇದನ್ನೂ ಓದಿ:ಸ್ವಂತ ಹಣ ವ್ಯಯಿಸಿ ರಸ್ತೆಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್ - ವಿಡಿಯೋ
ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ: ಸೂರಜ್ ಕುಮಾರ್ ಕರ್ನಾಟಕದ ಹೆಸರಾಂತ ಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಅವರ ಪುತ್ರ. ಶ್ರೀನಿವಾಸ್ ಅವರು ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮ. ಐರಾವತ ಮತ್ತು ತಾರಕ್ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಸೂರಜ್ ಕುಮಾರ್ ನೀನಾಸಂ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ನಟನೆಗೆ ತರಬೇತಿ ಪಡೆದುಕೊಂಡಿದ್ದರು. ಇವರಿಗೆ ಕೇವಲ 35 ವರ್ಷ. ಇವರು ಕೆಲವು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.