ಬೆಳಗಾವಿ: ಚಿತ್ರರಂಗದಲ್ಲಿ 30 ವರ್ಷ ಸಲ್ಲಿಸಿದ ಸೇವೆಗಾಗಿ ನನಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಈ ಸಂಭ್ರಮದ ಕ್ಷಣದಲ್ಲಿ ತಂದೆ ಇರಬೇಕಿತ್ತು ಎಂದು ನಟ ರಮೇಶ್ ಅರವಿಂದ್ ಭಾವುಕರಾದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಗೌರವ ಡಾಕ್ಟರೇಟ್ ಪದವಿ ಸಿಗುತ್ತಿದ್ದಂತೆ ಸಂಬಂಧಿಕರಿಗೆ ವಾಟ್ಸಪ್ ಮೆಸೇಜ್ ಮಾಡಿದೆ. ಅಭಿನಂದನೆಗಳು, ತಂದೆ ಇರಬೇಕಿತ್ತು ಎಂದು ಆ ಕಡೆಯಿಂದ ಪ್ರತಿಕ್ರಿಯೆ ಬಂತು. ನನ್ನ ಈ ಸಂಭ್ರಮದ ಕ್ಷಣದಲ್ಲಿ ತಂದೆ ಇರಬೇಕಿತ್ತು ಎಂದು ತಂದೆಯನ್ನು ನೆನೆದು ರಮೇಶ್ ಭಾವುಕರಾದರು.
ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ. ನನ್ನ ಜೊತೆಗೆ ನಟಿಸಿರುವ ಹಲವು ನಾಯಕ-ನಟಿಯರನ್ನು ನಾನು ಸ್ಮರಿಸುತ್ತೇನೆ. ಎಲ್ಲರ ಸಹಕಾರವೇ ನನ್ನ ಈ ಸಾಧನೆಗೆ ಕಾರಣ ಎಂದು ಹೇಳಿದರು.
ಇದನ್ನೂ ಓದಿ:ನಟಿ ಅಮೂಲ್ಯ ಹುಟ್ಟುಹಬ್ಬ.. ತಮಗೆ ಸೆ.14 ವ್ಯಾಲೆಂಟೈನ್ ಡೇ ಎಂದ ಪತಿ ಜಗದೀಶ್
ನಮ್ಮ ಹೆತ್ತವರು, ನಮ್ಮನ್ನು ನೋಡಿ ಖುಷಿ ಪಡುವವರು, ಆಪ್ತರು, ಕುಟುಂಬಸ್ಥರಿಗೆ ಖಷಿ ಆಗೋ ವಿಚಾರಗಳು ಸಿಕ್ಕಾಗ ನಮಗೂ ಖುಷಿ ಆಗುತ್ತದೆ. ನನಗೆ ಡಾಕ್ಟರೇಟ್ ನೀಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಾಗೂ ರಾಜ್ಯಪಾಲರಿಗೆ ಧನ್ಯವಾದಗಳು. ಇದಕ್ಕೆಲ್ಲ ಕಾರಣ ಸಿನಿಮಾ. ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ. ಅದ್ಭುತ ಪಾತ್ರಗಳು, ಒಳ್ಳೆಯ ಸಿನಿಮಾ ಸಿಕ್ಕಿದೆ. ಅದ್ಭುತ ನಟ-ನಟಿಯರ ಜೊತಗೆ ಅಭಿನಯ ಮಾಡುವ ಅವಕಾಶ ಕೊಟ್ಟಿದೆ. ಅನುಕೂಲಕರ ಜೀವನ ಕೊಟ್ಟಿದೆ. ದೃಶ್ಯ ಕಾವ್ಯಗಳನ್ನು ಮಾಡುವ ಅವಕಾಶ ಕೊಟ್ಟಿದೆ ಎಂದು ರಮೇಶ್ ಅರವಿಂದ ಕೃತಜ್ಞತೆ ಸಲ್ಲಿಸಿದರು.