ಸೂಪರ್ ಹಿಟ್ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆಗೆ ನಾಮಿನೇಟ್ ಆಗಿದ್ದು, ಭಾರತದ ಕೀರ್ತಿ ಹೆಚ್ಚಿದೆ. ಇದೇ ವಿಭಾಗದಲ್ಲಿ ಎಂಎಂ ಕೀರವಾಣಿ ಸಂಯೋಜನೆಯ ಈ ನಾಟು ನಾಟು ಹಾಡು ಈಗಾಗಲೇ ಪ್ರಪಂಚದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಆದರೆ ಅಂತಾರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾದ ಚೆಲ್ಲೋ ಶೋ ಅಂತಿಮ ಪಟ್ಟಿಗೆ ನಾಮನಿರ್ದೇಶನಗೊಳ್ಳುವಲ್ಲಿ ವಿಫಲವಾಗಿದೆ.
ಆಸ್ಕರ್‌ಗೆ ಭಾರತದ ಮೂರು ಚಲನಚಿತ್ರಗಳು: ಕಳೆದ 55 ವರ್ಷಗಳಿಂದ ಭಾರತವು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಸ್ಕರ್‌ಗಾಗಿ ಅರ್ಜಿ ಕಳುಹಿಸುತ್ತಿದೆ. ಈವರೆಗೆ ಆಯ್ಕೆಯಾದ ಚಲನಚಿತ್ರಗಳು ನಾಮನಿರ್ದೇಶನಗಳ ಕಿರುಪಟ್ಟಿಗೆ ಬಂದಿರುವುದು ಕೇವಲ ಮೂರು ಸಂದರ್ಭಗಳಲ್ಲಿ ಮಾತ್ರ. ಶತಮಾನದಷ್ಟು ಹಳೆಯದಾದ ಚಲನಚಿತ್ರೋದ್ಯಮವನ್ನು ಹೊಂದಿರುವ ದೇಶಕ್ಕೆ (ಭಾರತ) ಇದು ನೀರಸ ದಾಖಲೆ. ಚೆಲ್ಲೋ ಶೋ ರೇಸ್‌ನಿಂದ ಹೊರಗೆ ಬಂದಿದೆ. ಆದರೆ ನಮ್ಮ ದೇಶದಿಂದ ಮೂರು ಚಲನಚಿತ್ರಗಳು ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು.
ಆಸ್ಕರ್ ನಾಮನಿರ್ದೇಶಿತ ಭಾರತೀಯ ಚಲನಚಿತ್ರಗಳು: ಕಳೆದ 55 ವರ್ಷಗಳಿಂದ ಭಾರತೀಯ ಚಲನಚಿತ್ರಗಳು ನಾಮನಿರ್ದೇಶನಗಳ ಪಟ್ಟಿಗೆ (ಅಂತಿಮ ಪಟ್ಟಿ) ಸೇರದೇ ಮನೆಗೆ ಹಿಂತಿರುಗುತ್ತವೆ. ನರ್ಗೀಸ್-ಸುನೀಲ್ ದತ್ ಅವರ ಮದರ್ ಇಂಡಿಯಾ (1957), ಮೀರಾ ನಾಯರ್ ಅವರ ಸಲಾಮ್ ಬಾಂಬೆ (1988) ಮತ್ತು ಅಶುತೋಷ್ ಗೋವಾರಿಕರ್ ಅವರ ಅಮೀರ್ ಖಾನ್ ಅಭಿನಯದ ಲಗಾನ್ (2001) ಆಸ್ಕರ್ ನಾಮನಿರ್ದೇಶನಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಮೂರು ಚಿತ್ರಗಳು.
ಆಸ್ಕರ್ ರೇಸ್‌ನಿಂದ ಹೊರಬಂದ ಚೆಲ್ಲೋ ಶೋ: ಡೈರೆಕ್ಟರ್ ಪಾನ್ ನಳಿನ್ ನಿರ್ದೇಶನದ ಚೆಲ್ಲೋ ಶೋ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ. ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಇದು ಗುಜರಾತಿ ಭಾಷೆಯ ಸಿನಿಮಾ. ಒಂಭತ್ತು ವರ್ಷದ ಬಾಲಕ ದೂರದರ್ಶನ ಲೋಕದಲ್ಲಿ ಮಾಡಿದ ಬದಲಾವಣೆ ಕುರಿತು ತಿಳಿಸಿದೆ ಈ ಚಿತ್ರ. ಆಸ್ಕರ್ ರೇಸ್ನಲ್ಲಿ ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿರುವ ಇತರೆ ಚಲನಚಿತ್ರಗಳು - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ), ಅರ್ಜೆಂಟೀನಾ 1985 (ಅರ್ಜೆಂಟೀನಾ), ಕ್ಲೋಸ್ (ಬೆಲ್ಜಿಯಂ) ಮತ್ತು ದಿ ಕ್ವೈಟ್ ಗರ್ಲ್ (ಐರ್ಲೆಂಡ್).