ಶಿವಮೊಗ್ಗ: ಕನ್ನಡಕ್ಕೆ ಕಾನೂನಿನ ಬಲ ಬೇಕು. ಆಗ ಮಾತ್ರ ಭಾಷೆಯ ಅಭಿವೃದ್ಧಿ ಸಾಧ್ಯ. ಆದ್ದರಿಂದ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022' ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಿದ್ದೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಾದರೂ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನ ಸಿಕ್ಕಿಲ್ಲ. ಸರ್ಕಾರಗಳು, ಅಧಿಕಾರಿಗಳು ಮತ್ತು ಶಿಕ್ಷಣ ವ್ಯವಸ್ಥೆ ಈ ಎಲ್ಲದರ ನಡುವೆ ಕನ್ನಡ ಭಾಷೆ ಸಿಲುಕಿಕೊಂಡಿದೆ. ಅನ್ನ ಕೊಡುವ ಭಾಷೆ ಕನ್ನಡವಾಗಬೇಕು ಎಂಬ ಹಿನ್ನೆಲೆಯಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಕಾರ್ಯಕ್ರಮ ಆಯೋಜಿಸಿದೆ ಎಂದರು.
ಕನ್ನಡದ ಮೂಲಕವೇ ಇಂದು ಜಗತ್ತನ್ನು ಪ್ರವೇಶಿಸಬೇಕಾಗಿದೆ. ಆಡಳಿತ ಭಾಷೆಯಾಗಿ ಕನ್ನಡ ಇನ್ನೂ ಸರಿಯಾದ ದಿಕ್ಕಿನತ್ತ ಹೋಗದಿರುವುದು ವಿಷಾದನೀಯ ಸಂಗತಿ. ಶಿಕ್ಷಣ, ಆಡಳಿತ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಕನ್ನಡವೇ ಪ್ರಧಾನವಾಗಬೇಕಾಗಿದೆ. ಔದ್ಯೋಗಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಕಡೆ ಕನ್ನಡದ ಬಳಕೆಯಾಗಬೇಕಾಗಿದೆ. ಕನ್ನಡಿಗರು ಕನ್ನಡ ಮಾತನಾಡುವುದನ್ನು ಗರ್ವ ಎಂದು ಭಾವಿಸಬೇಕಾಗಿದೆ ಎಂದರು.
ಕನ್ನಡದ ಹಲವು ಸಮಸ್ಯೆಗಳ ನಿವಾರಣೆಗಾಗಿ ಭಾಷೆಯ ಹೊಸ ಆವಿಷ್ಕಾರಕ್ಕಾಗಿ, ಉದ್ಯೋಗಕ್ಕಾಗಿ ಶಿಕ್ಷಣದಲ್ಲಿ ಕನ್ನಡ ಪ್ರಾಧಾನ್ಯತೆ ಪಡೆಯುವುದಕ್ಕಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಮುಂದಿನ ಅಧಿವೇಶನದಲ್ಲಿಯೇ ಇದು ಮಂಡನೆಯಾಗಲಿದ್ದು, ಜಾರಿಗೆ ಬರುವ ಎಲ್ಲ ಸಾಧ್ಯತೆ ಇದೆ ಎಂದರು.