ಸ್ಯಾಂಡಲ್ವುಡ್ನಲ್ಲಿ ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ಸ್ಟೋರಿ ಅಂತಹ ಅದ್ಭುತ ಪ್ರೇಮಕಥೆಯುಳ್ಳ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಶಶಾಂಕ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ತಾಯಿಗೆ ತಕ್ಕ ಮಗ ಸಿನಿಮಾ ಬಳಿಕ ಸ್ವಲ್ಪ ಗ್ಯಾಪ್ ತಗೆದುಕೊಂಡಿದ್ದ ನಿರ್ದೇಶಕ ಶಶಾಂಕ್, ಈಗ ಹೊಸ ಪ್ರತಿಭೆಗಳ ಜೊತೆ ಕ್ಯೂಟ್ ಲವ್ ಸ್ಟೋರಿ ಹೇಳೋದಿಕ್ಕೆ ಬರ್ತಾ ಇದ್ದಾರೆ. ಈ ಚಿತ್ರಕ್ಕೆ ಲವ್ 360 ಅಂತಾ ಟೈಟಲ್ ಇಟ್ಟಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡಲಾಗಿತ್ತು.
ಮೂರು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್..ತಮ್ಮ ಸಿನಿಮಾ ಕುರಿತು ಮೊದಲಿಗೆ ಮಾತಿಗಳಿದ ನಿರ್ದೇಶಕ ಶಶಾಂಕ್, "ತಾಯಿಗೆ ತಕ್ಕ ಮಗ" ಚಿತ್ರದ ನಂತರ ಮೂರು ವರ್ಷಗಳ ಬಳಿಕ ನಾನು ನಿರ್ದೇಶಿಸಿರುವ ಚಿತ್ರವಿದು. ಲಾಕ್ಡೌನ್ ಸಮಯದಲ್ಲಿ ಸಿದ್ಧವಾಗಿದೆ. ನಾನು ಉಪೇಂದ್ರ ಅವರ ಚಿತ್ರ ನಿರ್ದೇಶಿಸಬೇಕಿತ್ತು. ಅದು ದೊಡ್ಡಮಟ್ಟದ ಚಿತ್ರ. ಚಿತ್ರೀಕರಣಕ್ಕೆ ಕೊರೊನಾ ನಿಯಮಾವಳಿಗಳು ಸಹಕಾರಿಯಾಗುವಂತೆ ಕಾಣಲಿಲ್ಲ. ಹಾಗಾಗಿ ಆ ಚಿತ್ರ ಮುಂದೂಡಿ, ಈ ಚಿತ್ರವನ್ನು ಆರಂಭಿಸಿದೆ. ಅದರಲ್ಲೂ ಹೊಸಬರೊಂದಿಗೆ ನಾನು ಕೆಲಸ ಮಾಡಿ ಸುಮಾರು ವರ್ಷಗಳೇ ಆಗಿತ್ತು.
ಈ ಚಿತ್ರದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಪ್ರವೀಣ್ ಸೇರಿದಂತೆ ಅವರ ಕುಟುಂಬದರೆಲ್ಲಾ ವೈದ್ಯರು. ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿಯಲ್ಲಿ ಇವರ ಆಸ್ಪತ್ರೆ ಇದೆ. ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ ನೀಡಿ ಪ್ರವೀಣ್ ತಂದೆ ಆ ಊರಿನ ಸುತ್ತ ಹೆಸರುವಾಸಿಯಾಗಿದ್ದರು. ಎಂಬಿಬಿಎಸ್ ಓದಿರುವ ಪ್ರವೀಣ್ಗೆ ನಟನೆಯಲ್ಲಿ ಆಸಕ್ತಿ. ಈ ಕುರಿತು ಅವರ ತಾಯಿ ನನ್ನ ಬಳಿ ಹೇಳಿದ್ದರು. ನಿರ್ಮಾಣವನ್ನೂ ಮಾಡುವುದಾಗಿ ಹೇಳಿದ್ದರು. ಆದರೆ, ಅವರ ಬಳಿ ಈ ಚಿತ್ರಕ್ಕೆ ಬೇಕಾದಷ್ಟು ಹಣವಿಲ್ಲದ ಕಾರಣ ನಮ್ಮ ಸಂಸ್ಥೆ ಸಹ ನಿರ್ಮಾಣಕ್ಕೆ ಕೈ ಜೋಡಿಸಿತ್ತು.
ಪ್ರವೀಣ್ಗೆ ನಟನೆಗೆ ಬೇಕಾದ ಎಲ್ಲ ತಯಾರಿ ನೀಡಲಾಗಿದೆ. ರಚನಾ ಇಂದರ್ ಈ ಚಿತ್ರದ ನಾಯಕಿ. ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಿದ್ ಶ್ರೀರಾಮ್ ಹಾಗೂ ಸಂಚಿತ್ ಹೆಗಡೆ ಹಾಡಿರುವ ಹಾಡುಗಳು ಕೇಳುಗರ ಮನ ಗೆದ್ದಿದೆ ಅಂದರು.