ಕಿಂಗ್ ಖಾನ್ ಶಾರುಖ್ ನಟನೆಯ ಜವಾನ್ ಸಿನಿಮಾ ಸಾಕಷ್ಟು ಪ್ರಶಂಸೆಗಳನ್ನು ಸ್ವೀಕರಿಸುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಸಹ ಸಿನಿಮಾಗೆ ತಮ್ಮ ವಿಮರ್ಶೆ ಕೊಡುತ್ತಿದ್ದಾರೆ. ಬಹುತೇಕ ಪಾಸಿಟಿವ್ ಪ್ರತಿಕ್ರಿಯೆ ಸ್ವೀಕರಿಸುತ್ತಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಕಾಂತೆ, ಕಾಬಿಲ್, ಶೂಟೌಟ್ ಅಟ್ ಲೋಖಂಡ್ವಾಲ, ಶೂಟೌಟ್ ಅಟ್ ವಡಲ ಮತ್ತು ಜಝ್ಬಾ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಸಂಜಯ್ ಗುಪ್ತಾ ಅವರು ಬ್ಲಾಕ್ಬಸ್ಟರ್ ಜವಾನ್ ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ಸಿನಿಮಾ ಮತ್ತು ಶಾರುಖ್ ನಟನೆ ಕುರಿತು ಗುಣಗಾನ ಮಾಡಿದ್ದಾರೆ. ಖಾನ್ ಕೆಲಸವನ್ನು ಶ್ಲಾಘಿಸುವುದಲ್ಲದೇ, ಭೂಗತ ಜಗತ್ತಿನ ಬೆದರಿಕೆಗಳ ನಡುವೆಯೂ ಅಚಲ ದೃಢತೆ ಪ್ರದರ್ಶಿಸಿರುವ ಖಾನ್ ಸಿನಿಮಾ ಜೀವನದ ಬಹುಮುಖ್ಯ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ನಿರ್ದೇಶಕ ಸಂಜಯ್ ಗುಪ್ತಾ ಟ್ವೀಟ್: 1990ರ ದಶಕದಲ್ಲಿ ಸಿನಿಮಾ ವಲಯದ ಮೇಲೆ ಭೂಗತ ಜಗತ್ತಿನ ಪ್ರಭಾವ ಉತ್ತುಂಗದಲ್ಲಿದ್ದ ವೇಳೆ, ನಟ ಶಾರುಖ್ ಖಾನ್ ಬೆದರಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಏಕಾಂಗಿ ತಾರೆಯಾಗಿ ನಿಂತಿದ್ದರು. ಶೂಟ್ ಮಾಡಬೇಕೆಂದರೆ ಶೂಟ್ ಮಾಡಿ, ಆದರೆ ನಾನು ನಿಮಗಾಗಿ ಕೆಲಸ ಮಾಡುವುದಿಲ್ಲ, ನಾನು ಪಠಾಣ್ ಎಂದು ಹೇಳುವ ಮೂಲಕ ಶಾರುಖ್ ಖಾನ್ ಬೆದರಿಕೆಗಳನ್ನು ಬಹಳ ಧೈರ್ಯದಿಂದ ಎದುರಿಸಿದ ಘಟನೆಯನ್ನು ಟ್ವೀಟ್ನಲ್ಲಿ ಗುಪ್ತಾ ನೆನಪಿಸಿಕೊಂಡರು. ಗುಪ್ತಾ ಅವರು ತಮ್ಮ ಟ್ವೀಟ್ನಲ್ಲಿ ಶಾರುಖ್ ಖಾನ್ ಅವರ ತತ್ವ ಸಿದ್ಧಾಂತ, ಅವುಗಳ ಮೇಲಿನ ಅಚಲ ಬದ್ಧತೆಯನ್ನು ಎತ್ತಿ ತೋರಿಸಿದರು.